ಇದೇ ವೇಳೆ ಮಂಡ್ಯ ಜಿಲ್ಲಾಧಿಕಾರಿಗಳನ್ನು ಆರ್. ಅಶೋಕ್ ಸಂಪರ್ಕಿಸಿದರು. ನಗರಸಭೆ ಸೇರ್ಪಡೆ ಕುರಿತಂತೆ ಗ್ರಾಮ ಪಂಚಾಯಿತಿಗಳು ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಕಳಿಸುವಂತೆ ಮೇಲಿಂದ ಒತ್ತಡ ಬಂದ ಕಾರಣ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಮನವರಿಕೆ ಮಾಡಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಶ್ವಾಸನೆ ನೀಡಿದ್ದಾರೆ.ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗುರುವಾರ ಸಂಜೆ ರೈತ ನಾಯಕಿ ಸುನಂದ ಜಯರಾಮ್ ನೇತೃತ್ವದಲ್ಲಿ ತೆರಳಿದ್ದ ಜನಪ್ರತಿನಿಧಿಗಳು ಹಾಗೂ ಮುಖಂಡರ ನಿಯೋಗದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ನಂತರ ಪೌರಾಡಳಿತ ಸಚಿವ ಬೈರತಿ ಸುರೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಆರ್.ಅಶೋಕ್, ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳನ್ನು ವಿಲೀನ ಮಾಡುವುದಕ್ಕೆ ಶೇ.99 ರಷ್ಟು ವಿರೋಧವಿದೆ. ಸೇರ್ಪಡೆ ಅಗತ್ಯವಿರಲಿಲ್ಲ ಎಂದು ಸಚಿವರಿಗೆ ತಿಳಿಹೇಳಿದರು.ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದಕ್ಕೆ ಆರ್ಥಿಕ ತೊಂದರೆ ಇದೆ. ಆದರೆ ಕ್ಷೇತ್ರದ ಶಾಸಕರ ಒತ್ತಡಕ್ಕೆ ಮಣಿಯಬೇಕಾಯಿತು ಎಂದು ಸಚಿವ ಬೈರತಿ ಸುರೇಶ್ ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಮಂಡ್ಯ ಜಿಲ್ಲಾಧಿಕಾರಿಗಳನ್ನು ಆರ್. ಅಶೋಕ್ ಸಂಪರ್ಕಿಸಿದರು. ನಗರಸಭೆ ಸೇರ್ಪಡೆ ಕುರಿತಂತೆ ಗ್ರಾಮ ಪಂಚಾಯಿತಿಗಳು ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಕಳಿಸುವಂತೆ ಮೇಲಿಂದ ಒತ್ತಡ ಬಂದ ಕಾರಣ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಮನವರಿಕೆ ಮಾಡಿದರು.ಬಳಿಕ ನಿಯೋಗದೊಂದಿಗೆ ಮಾತುಕತೆ ನಡೆಸಿದ ಆರ್. ಅಶೋಕ್, ಗೆಜ್ಜಲಗೆರೆ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಪರಿಹಾರ ರೂಪಿಸುವ ಜೊತೆಗೆ ನನ್ನ ನೇತೃತ್ವದಲ್ಲಿ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗುವುದು ಎಂದು ಆರ್ .ಅಶೋಕ್ ನೀಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಸುನಂದ ಜಯರಾಮ್ ತಿಳಿಸಿದರು.
ನಿಯೋಗದಲ್ಲಿ ಗ್ರಾಪಂ ಅಧ್ಯಕ್ಷ ರಾಧಾ, ಜಿ. ಎಚ್. ವೀರಪ್ಪ, ಜಿ.ಸಿ .ಮಹೇಂದ್ರ, ಜಿ.ಪಿ.ಯೋಗೇಶ್, ಜಿ.ಡಿ.ಚಂದ್ರಶೇಖರ್, ಜಿ.ಟಿ.ಚಂದ್ರಶೇಖರ್, ವೀರೇಶ್, ಶಿವಕುಮಾರ್, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಇದ್ದರು.