ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಸರ್ಕಾರ ರೈತರ ಭೂಮಿ ಕಸಿದುಕೊಳ್ಳುತ್ತಿದೆ ಎಂದು ವಕ್ಫ್ ವಿಚಾರದಲ್ಲಿ ಜಿಲ್ಲೆಯಲ್ಲಿ ಎರಡು ವಾರಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳವಣಿಗೆಗಳಾಗಿವೆ. ಅಸತ್ಯವನ್ನು ಸತ್ಯ ಮಾಡುವ ಕೆಲಸ ನಡೆದಿದ್ದು, ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿನ ಉಪಚುನಾವಣೆಗಾಗಿ ರಾಷ್ಟ್ರಮಟ್ಟದಲ್ಲಿ ಹಿಂದು- ಮುಸ್ಲಿಂ ಮಧ್ಯೆ ಬಿರುಕು ಹುಟ್ಟಿಸಿ ಓಟು ಗಿಟ್ಟಿಸುವ ಕುತಂತ್ರಕ್ಕೆ ಬಿಜೆಪಿ ಮುಂದಾಗಿದೆ ಎಂದು ಕೈಗಾರಿಕಾ ಹಾಗೂ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.ನಗರದ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಾವರಿ ಸಚಿವನಾಗಿದ್ದಾಗ ರೈತರಿಗೆ ನೀರು ಕೊಟ್ಟವನು ನಾನು. ವಕ್ಫ್ ವಿಚಾರದಲ್ಲಿ ಅನೇಕ ರೈತರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ, ರೈತರ ಪರವಾಗಿ, ಹಿಂದೂಗಳ ಪರವಾಗಿ ಇದ್ದೇನೆ. ನಾನು ಯಾವತ್ತೂ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಜಿಲ್ಲೆಯಲ್ಲಿ ರೈತರ, ಹಿಂದೂಗಳ, ಮಠಗಳ, ದೇವಸ್ಥಾನಗಳು ಸೇರಿ ಯಾವುದೇ ಧರ್ಮಕ್ಕೆ ಸೇರಿದ ಒಂದೇ ಒಂದು ಇಂಚು ಭೂಮಿ ಕೂಡ ವಕ್ಫ್ ಪಾಲಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಅಲ್ಲದೇ, ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಸಹ ಕಂದಾಯ ಇಲಾಖೆಯಿಂದ ಈಗಾಗಲೇ ಕೊಟ್ಟಿರುವ 423 ನೋಟಿಸ್‌ಗಳನ್ನು ವಾಪಸ್ ಪಡೆದಿದ್ದಾರೆ. ಜಿಲ್ಲೆಯಲ್ಲಿನ 12 ಸಾವಿರ ಎಕರೆ 1974ರಲ್ಲಿ ಗೆಜೆಟ್ ಆಗಿದ್ದರೂ ಕೂಡ ಆಗಲೇ ಅದನ್ನು ಇಂದೀಕರಣ ಮಾಡಿಕೊಳ್ಳದ ಹಿನ್ನೆಲೆ ಆ ಭೂಮಿಯನ್ನು ಇನಾಂ ಆಕ್ಟ್ ಹಾಗೂ ಭೂ ಸುಧಾರಣ ಕಾಯ್ದೆಯಲ್ಲಿ ಈಗಾಗಲೇ ಹಂಚಲಾಗಿದೆ. ಹಾಗಾಗಿ, ಹಂಚಿರುವ ಭೂಮಿಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂಬ ಮತ್ತೊಂದು ಸ್ಪಷ್ಟನೆ ನಿಡಿದರು.ಬಿಜೆಪಿ ಹೂರಣ ಬಿಚ್ಚಿಟ್ಟ ಸಚಿವವಕ್ಫ್ ವಿಚಾರದಲ್ಲಿ ಮಾಡೋದೆಲ್ಲ ಮಾಡಿ ಈಗ ಬಿಜೆಪಿಯವರೇ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯದ್ದು ನಾಟ್ಯಮಂಡಳಿ ನಡೆದಿದೆ. ಇದು ಯಡಿಯೂರಪ್ಪ ವರ್ಸಸ್ ಅದರ್ಸ್ ಹಾಗೂ ಬಿಜೆಪಿ ಒಳಜಗಳದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ದೇವರಹಿಪ್ಪರಗಿಯ ಮುರುಗೇಂದ್ರ ಖ್ಯಾಡಿ ಎಂಬುವರ ಪಹಣಿ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಹಾಕಿದ್ದಾರೆ. ಇಲ್ಲಿನ ಮಾಶಾಬಿ ಮುಲ್ಲಾ ಎಂಬುವರ ಪಹಣಿಯಲ್ಲೂ ವಕ್ಫ್‌ಬೋರ್ಡ್ ಎಂದು ಇಂದೀಕರಣ ಮಾಡಿದ್ದಾರೆ. ಮಣೂರ ಗ್ರಾಮದ ರೈತ ಸುಭಾಷ ಆನಗುಂದಿ ಅವರ ಪಹಣಿಯಲ್ಲಿ ವಕ್ಫ್‌ಬೋರ್ಡ್ ಎಂದು ಮ್ಯುಟೇಷನ್ ಮಾಡಿದ್ದಾರೆ. ಇಂಡಿ ತಾಲೂಕಿನಲ್ಲಿ ನಿಂಗಪ್ಪ ಶಿರಶ್ಯಾಡ ಎಂಬ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಮ್ಯೂಟೇಷನ್ ಮಾಡಿದ್ದಾರೆ. ಇದರ ಜೊತೆಗೆ ಇನ್ನೂ ಸಾಕಷ್ಟು ರೈತರ ಪಹಣಿಗಳಲ್ಲಿ ಹೀಗೆ ವಕ್ಫ್‌ಬೋರ್ಡ್ ಎಂದು ಎಂಟ್ರಿ ಮಾಡಿದ್ದಾರೆ ಎಂದು ತಿಳಿಸಿದರು.ದಾಖಲೆ ಸಮೇತ ಬಿಡುಗಡೆ:
ಬಿಜೆಪಿ ಅಧಿಕಾರಲ್ಲಿದ್ದಾಗೆಲ್ಲ ವಕ್ಫ್ ಬಗ್ಗೆ ಭಾರೀ ಕಾಳಜಿ ತೋರಿಸಿ ರೈತರಿಂದ ಭೂಮಿ ಕಸಿಯುವ ಕೆಲಸ ಮಾಡಿದ್ದಾರೆ. ರೈತರಿಂದ ಭೂಮಿ ಕಸಿದು ವಕ್ಫ್ ಆಸ್ತಿಗಳ ಕ್ರಮಬದ್ಧತೆ ಮಾಡುವುದು, ಅವುಗಳ ಸಂರಕ್ಷಣೆ, ನಿರ್ವಹಣೆ, ಡಿಜಿಟಲೀಕರಣ, ವಕ್ಫ್ ಆಸ್ತಿಗಳಿಗೆ ಪರಿಹಾರ ಕೊಡಿಸುವುದು, ವಕ್ಫ್‌ಗೆ ಸೇರಿದ ಭೂಮಿಯಲ್ಲಿ ಆಗಿರುವ ಅತಿಕ್ರಮಣ ತೆರವುಗೊಳಿಸುವುದು, ಜಿಲ್ಲಾ ಮಟ್ಟದಲ್ಲಿ ವಕ್ಫ್ ಆಸ್ತಿ ಕಾರ್ಯಪಡೆ ರಚಿಸಿ ರಾಜ್ಯದ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು, ಗ್ರಾಮೀಣ ಮಟ್ಟದ ಗಾವಠಾಣ ಆಸ್ತಿಗಳನ್ನು ವಕ್ಫ್ ಎಂದು ನಮೂದು ಮಾಡುವ ಕುರಿತು. ಇನಾಂ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ವಕ್ಫ್ ಆಸ್ತಿಗಳು ಇತರರಿಗೆ ಮಂಜೂರಾಗಿದ್ದ ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸಿ ವಕ್ಫ್ ಎಂದು ವಾಪಸ್ ಪಡೆಯುವ ಆದೇಶ ಸೇರಿದಂತೆ ಹಲವಾರು ಸುತ್ತೋಲೆಗಳು ಹಾಗೂ ಆದೇಶಗಳನ್ನು 2010ರಿಂದಲೇ ಕಾಲಕಾಲಕ್ಕೆ ಹೊರಡಿಸುತ್ತ ಬಂದಿದ್ದಾರೆ. 2010ರ ಏಪ್ರಿಲ್ 1, ಮೇ 29, 2011 ಏಪ್ರಿಲ್ 2, ಏಪ್ರಿಲ್ 23, 2020 ಆಗಸ್ಟ್ 29, 2021 ಜನೇವರಿ 8, ಫೆಬ್ರುವರಿ 27 ರಂದು ಹೊರಡಿಸಲಾದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ 2014ರ ಪ್ರಣಾಳಿಕೆಯಲ್ಲಿ ವಕ್ಫ್ ಬೋರ್ಡ್‌ಗೆ ಶಕ್ತಿ ತುಂಬುವುದು, ಅವರ ಧಾರ್ಮಿಕ ಮುಖಂಡರ ಜೊತೆ ಚರ್ಚಿಸುವುದು, ಒತ್ತುವರಿಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುವುದು ಎಂದು ಬಿಜೆಪಿಯವರು ಪ್ರಣಾಳಿಕೆಯಲ್ಲೇ ಹಾಕಿದ್ದರು. ಈಗ ಬಂದು ಹೋರಾಟ ಮಾಡುವ ತೇಜಸ್ವಿಸೂರ್ಯ, ಶೋಭಾ ಕರಂದ್ಲಾಜೆ, ಅರುಣ ಶಹಾಪುರ ಆವಾಗ ಮಲಗಿದ್ರಾ?. 2008ರಲ್ಲಿ ನಿಮ್ಮದೆ ಸರ್ಕಾರವಿದ್ದಾಗ ವಕ್ಫ್‌ಗೆ ಸಪೋರ್ಟ್ ಮಾಡುವ ಎಲ್ಲಾ ಮಾಡಿದಿರಿ, ನೆಹರು ಮಾಡಿದ ವಕ್ಫ್ ಕಾನೂನು ತೆಗೆಯಬೇಕು ಎನ್ನುತ್ತೀರಿ, ನಿಮ್ಮದೇ ಸರ್ಕಾರವಿದ್ದಾಗ ಯಾಕೆ ತೆಗೆಯಲಿಲ್ಲ? ಆಗ ನಿಮ್ಮ ಹಿಂದುತ್ವ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.ವಕ್ಫ್ ಮಾಡಿದ ತಪ್ಪು ಸರಿಪಡಿಸಲಾಗಿದೆವಕ್ಫ್ನವರು ಅನೇಕ ತಪ್ಪು ಮಾಡಿದ್ದಾರೆ. ಹೊನವಾಡ ವಿಚಾರ, ಇಂಡಿ ತಾಲೂಕಿನಲ್ಲಿ, ಸಿಂದಗಿ ಮಠದ ಆಸ್ತಿಯಲ್ಲಿ ಹೀಗೆ ಅನೇಕ ಕಡೆಗಳಲ್ಲಿ ವಕ್ಫ್ ಮಾಡಿದ ತಪ್ಪನ್ನು ಸರಿಪಡಿಸಲಾಗಿದೆ. ನಾನು ವಕ್ಫ್ ಪರವಾಗಿ ಮಾತನಾಡುತ್ತಿಲ್ಲ, ಸತ್ಯ ಮಾತನಾಡುತ್ತಿದ್ದೇನೆ ಎಂದರು.
ನಾವು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದು, ಅವರು 1920 ರಿಂದ 193ರಲ್ಲಿನ ದಾಖಲೆಗಳನ್ನು ತೆಗೆದು, ಪರಿಶೀಲನೆ ಮಾಡುತ್ತಿದ್ದಾರೆ. ಅದರಲ್ಲಿ 1974ರ ಮೊದಲು ಆ ಭೂಮಿ ಯಾರಿಗೆ ಸೇರಿದ್ದು ಎಂಬುದನ್ನು ಪರಿಶೀಲಿಸಿ ಅವರಿಗೆ ಕೊಡಲಾಗುವುದು. ಅಲ್ಲದೆ ಜಿಲ್ಲಾಧಿಕಾರಿ ಅವರು ತಿಳಗೋಳ, ಕನ್ನೂರ ಗ್ರಾಮದಲ್ಲಿ ರೈತರಿಗೆ ಸೇರಿದ ಆಸ್ತಿಗಳು ಎಂದು ಗೊತ್ತಾದಾಗ ಅದರಲ್ಲಿ ಕೆಲವು ಆಸ್ತಿಗಳನ್ನು ವಕ್ಫ್‌ನಿಂದ ರದ್ದು ಮಾಡಿದ್ದಾಗಿ ತಿಳಿಸಿದರು.ತಪ್ಪಿತಸ್ಥರ ವಿರುದ್ಧ ಕ್ರಮಇಂಡಿ ತಹಸೀಲ್ದಾರ್ ನೋಟಿಸ್ ಕೊಡದೆ 44 ರೈತರ ಪಹಣಿಗಳಲ್ಲಿ ವಕ್ಫ್‌ಬೋರ್ಡ್ ಎಂದು ಸೇರಿಸಿ ತಪ್ಪು ಮಾಡಿದ್ದ, ಅದನ್ನು ತಕ್ಷಣ ವಾಪಸ್ ಪಡೆದು ಪಹಣಿಯಲ್ಲಿ ಸೇರಿಸಲಾಗಿದ್ದ ಹೆಸರನ್ನು ತೆಗೆದಿದೆ. ಅಲ್ಲದೆ, ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಸ್ಮಿತೆಗೆ ಧಕ್ಕೆಯಾದರೆ ಸುಮ್ಮನಿರಲ್ಲ.
ವಚನದರ್ಶನ ಎಂಬ ಪುಸ್ತಕ ಮಾಡಿ ಬಸವಣ್ಣನವರ ಬದುಕಿನ ವಿಚಾರಗಳನ್ನು ತಿರುಚಿ ತಿದ್ದಲು ಹೊರಟಿದ್ದಾರೆ. ಕೆಲವರು ಸೇರಿ ಬಸವಣ್ಣನವರ ಅಸ್ಮಿತೆ ಹಾಳು ಮಾಡಲು ಹೊರಟಿದ್ದಾರೆ. ಬೇರೆಯವರ ಅಸ್ಮಿತೆ ತಿರುಚುವುದನ್ನು ಬಿ.ಎಲ್.ಸಂತೋಷ ಬಿಡಬೇಕು. ನಮ್ಮ ಅಸ್ಮಿತೆ ನಮ್ಮ ತಾಯಿ. ನಿಮ್ಮ ಅಸ್ಮಿತೆಯ ಬಗ್ಗೆ ನಾವು ಗೌರವಿಸುತ್ತೇವೆ. ನಮ್ಮ ಅಸ್ಮಿತೆ ತಿರುಚಲು ಹೋದರೆ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಮಾಧ್ಯಮ ಸಲಹೆಗಾರ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.ಚಿತ್ರ: 08BIJ01ಬರಹ: ವಕ್ಫ್ ಮೇಲೆ ಬಿಜೆಪಿಯ ಕಾಳಜಿ ಕುರಿತು ಹೊರಡಿಸಿರುವ ದಾಖಲೆ ನೀಡಿದ ಎಂ.ಬಿ.ಪಾಟೀಲ್
ಬಾಕ್ಸ್ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿವಕ್ಫ್ ಆಸ್ತಿ ಸಂರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಸಹೋದರಿ ಶೋಭಾ ಕರಂದ್ಲಾಜೆ ಸಂಸದರಾಗಿದ್ದಾಗ ಲೋಕಸಭೆಯಲ್ಲಿ 2019ರಲ್ಲಿ ಪ್ರಶ್ನೆ ಕೇಳಿದ್ದರು. ಆಗ ಸರ್ಕಾರ 2014ರಿಂದ 2019ರ ವರೆಗೆ ಶೇ.85 ವಕ್ಫ್ ಆಸ್ತಿ ಡಿಜಿಟಲೈಜ್ಜೇ ಮಾಡಿದ್ದೇವೆ ಎಂದು ಉತ್ತರಿಸಿದೆ. ಆಗಲೇ ಇವರು ಇನ್ನುಳಿದ 15 ಪರ್ಸೆಂಟ್ ಆಸ್ತಿಗಳನ್ನು ಕೂಡ ಡಿಜಿಟಲ್ ಮಾಡಿ ಎಂದಿದ್ದಾರೆ. ಅದಕ್ಕಾಗಿ ದೇಶದ ಎಲ್ಲ ರಾಜ್ಯಗಳಿಗೆ ₹ 11ಕೋಟಿ ಆರ್ಥಿಕ ಸಹಾಯವನ್ನೂ ಕೊಟ್ಟಿದೆ. ಡಾಟಾ ಎಂಟ್ರಿ ಮಾಡಲು ವಾಮ್ಸಿ ಪೋರ್ಟಲ್ ಮಾಡಲಾಗಿದೆ. ರಾಜ್ಯದಲ್ಲಿ 2019ರಲ್ಲಿ 5 ಲಕ್ಷ ಸ್ಥಿರಾಸ್ತಿಗಳನ್ನು ಎಂಟ್ರಿ ಮಾಡಲಾಗಿದೆ. ವಕ್ಫ್ ಸಮಸ್ಯೆಗಳನ್ನು ಬಗೆಹರಿಸಲು ನಿವೃತ್ತ ನ್ಯಾಯಾಧೀಶರನ್ನು ಇವರೇ ನೇಮಕ ಮಾಡಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮೋದಿ ಸಹ ಕಾಳಜಿ ಹೊಂದಿದ್ದಾರೆ. ಆಗ ಶೋಭಾ ಎಲ್ಲ ಮಾಹಿತಿ ಕೇಳಿದ್ದಾರೆ, ಅವರಿಗೆ ಆಗಲೇ ಎಲ್ಲವೂ ಗೊತ್ತಿತ್ತು. ಆದರೆ ಈಗ ಏಕಾಏಕಿ ಬಂದು ವಕ್ಫ್ ರದ್ದುಗೊಳಿಸಿ ಎಂದು ಫುಟಪಾತ್ ಮೇಲೆ ಮಲಗಿ ಹೋರಾಟ ಮಾಡುತ್ತಾರೆ. ಬಿಜೆಪಿ ನಿಲುವು ಎಲ್ಲವೂ ವಕ್ಫ್ ಪರವಾಗಿಯೇ ಇದೆ ಎಂದು ಹೇಳಿದರು.ಬಾಕ್ಸ್‌ಮಠಾಧೀಶರಿಗೆ ಈ ವಿಷಯ ಗೊತ್ತಿಲ್ಲಬಿಜೆಪಿ ಕಾಲದಲ್ಲಿ ಏನೇನು ಅದೇಶಗಳನ್ನು ಹೊರಡಿಸಿದ್ದಾರೆ? ಎಂಬುದರ ಬಗ್ಗೆ ಬಿಜೆಪಿಯವರ ಹೋರಾಟದಲ್ಲಿ ಭಾಗಿಯಾಗಿದ್ದ ಮಠಾಧೀಶರಿಗೆ ಗೊತ್ತಿಲ್ಲ. ಇದೆಲ್ಲ ಮಾಡಿದ್ದು ಬಿಜೆಪಿಯವರು ಎಂಬುದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಮಠದ ಸ್ವಾಮೀಜಿಗಳಿಗೆ, ಜ್ಞಾನಯೋಗಾಶ್ರಮದ ಶ್ರೀಗಳಿಗೆ, ಪಂಚಮಸಾಲಿ ಶ್ರೀಗಳಿಗೆ ಗೊತ್ತಿಲ್ಲ. ಬಿಜೆಪಿ ಕುತಂತ್ರ ಹಾಗೂ ವಕ್ಫ್ ಬಗ್ಗೆ ಅವರು ತೋರಿಸಿದ ಅಪಾರ ಕಾಳಜಿಯ ಬಗ್ಗೆ ಗೊತ್ತಾದಾಗ ಅವರೇ ಬಿಜೆಪಿಯ ವಿರುದ್ಧ ತಿರುಗಿ ಬಿಳುತ್ತಾರೆ. ಈಗ ಅವರಿಗೆ ವಕ್ಫ್ ವಿಚಾರದಲ್ಲಿ ಬಿಜೆಪಿ ಮಾಡಿದ ಮುಸ್ಲಿಂ ಕಾಳಜಿಯ ಬಗ್ಗೆ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ ಎಂದರು. ನಾನು ಇಷ್ಟಕ್ಕೆ ಬಿಡಲ್ಲ. ಬಿಜೆಪಿ ಮಾಡಿದ ಅವಾಂತರಗಳ ಕುರಿತು ಹಾಗೂ ನಾವು ಸರಿಪಡಿಸಿದ ಸಮಸ್ಯೆಗಳ ಕುರಿತು ಎಲ್ಲಾ ಸ್ವಾಮೀಜಿಗಳಿಗೆ ದಾಖಲೆಗಳನ್ನು ಕಳುಹಿಸುವುದಾಗಿ ತಿಳಿಸಿದರು.ಕೋಟ್
ಜೆಪಿಸಿ ಚೇರಮನ್ ಜಗದಂಬಿಕಾ ಪಾಲ್ ಅವರಿಗೆ ಬಿಜೆಪಿಯವರು ಬಕ್ರಾ ಮಾಡಿದ್ದಾರೆ. ವಕ್ಫ್ ರದ್ದಾಗುವ ವರೆಗೆ ಹೋರಾಟ ಎಂದು ಅನಿರ್ಧಿಷ್ಟಾವಧಿ ಧರಣಿ ಕುಳಿತವರು ನಾಲ್ಕೇ ದಿನಕ್ಕೆ ಹಿಂತೆಗೆದುಕೊಂಡಿದ್ದಾರೆ. ಮತ್ತೆ ಹೋರಾಟ ಮುಂದುವರೆಸಲಿ. ಜಗದಂಬಿಕಾ ಪಾಲ್ ಬಂದಿದ್ದು ಅಧಿಕೃತವಲ್ಲ, ಬಿಜೆಪಿಯವರು ಮಾತ್ರ ಬಂದರೆ ಅದು ಜೆಪಿಸಿ ಕಮಿಟಿ ಆಗಲ್ಲ. ಅವರ ಮೇಲೆ ಹಕ್ಕುಚ್ಯುತಿ ಆಗುತ್ತದೆ.ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ