ಸಾರಾಂಶ
ದಾವಣಗೆರೆ : ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಾರಿಕೋಲು ಚಳವಳಿ ಮೂಲಕ ಮೂರನೇ ಹಂತದ ಜನಾಕ್ರೋಶ ಯಾತ್ರೆಯನ್ನು ಮಧ್ಯ ಕರ್ನಾಟಕದ ದಾವಣಗೆರೆಯಿಂದ ಆರಂಭಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅವರ ಪುತ್ಥಳಿಗೆ ಬಿ.ವೈ.ವಿಜಯೇಂದ್ರ, ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ ಇತರರ ನೇತೃತ್ವದಲ್ಲಿ ಪುಷ್ಪಮಾಲೆ ಅರ್ಪಿಸಿ, ಅಲ್ಲಿಂದ ಜಯದೇವ ವೃತ್ತದಲ್ಲಿ ಜನಾಕ್ರೋಶ ಯಾತ್ರೆಯ ಪ್ರತಿಭಟನಾ ಸಭೆಗೆ ತೆರಳಿದರು.
ಅನಂತರ ಪಕ್ಷದ ನಾಯಕರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಬೆಲೆ ಏರಿಕೆ ಖಂಡಿಸಿ, ಆಡಳಿತ ವೈಫಲ್ಯದ ವಿರುದ್ಧ ರಣ ಕಹಳೆ ಮೊಳಗಿಸುವ ಮೂಲಕ ವಿಧಾನಸಭೆಯ ಮೂರನೇ ಮಹಡಿಯಿಂದ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯುವವರೆಗೂ ಕುರುಕ್ಷೇತ್ರ ಯುದ್ಧವನ್ನು ಬಿಜೆಪಿ ನಿಲ್ಲಿಸುವುದಿಲ್ಲವೆಂಬ ಸಂದೇಶವನ್ನು ವೇದಿಕೆ ಮೂಲಕ ರವಾನಿಸಿದರು.
ಬಹಿರಂಗ ಸಭೆಯಲ್ಲಿ ವಿಜಯೇಂದ್ರ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯಿಂದ ಎಲ್ಲ ಮುಖಂಡರು ಕೈಯಲ್ಲೊಂದೊಂದು ಬಾರಿಕೋಲು ಹಿಡಿದುಕೊಂಡು, ಅದನ್ನು ಗಾಳಿಯಲ್ಲಿ ಬೀಸುತ್ತಾ ಹಾಲಿ-ಮಾಜಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ರೈತರು, ಯುವಜನರ ಸಮೇತ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೂ ಬೃಹತ್ ಪಾದಯಾತ್ರೆಯಲ್ಲಿ ತೆರಳಿ, ಅಲ್ಲಿ ಮನವಿ ಅರ್ಪಿಸಿದರು.
ಜನಾಕ್ರೋಶ ಯಾತ್ರೆಯಲ್ಲಿ ರಾಜ್ಯ ನಾಯಕರಿಗೆ ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹರಿಹರ, ಹೊನ್ನಾಳಿ, ಜಗಳೂರು ತಾಲೂಕುಗಳ ಮುಖಂಡರು, ಕಾರ್ಯಕರ್ತರು, ರೈತರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಸಾಥ್ ನೀಡಿದರು. ದಾರಿಯುದ್ದಕ್ಕೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ತೋರ್ಪಡಿಸಿದರು.
ಬಿಜೆಪಿ ಕಾರ್ಯಕರ್ತರು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸುವವರೆಗೂ ನಮ್ಮ ಹೋರಾಟ ನಿರಂತರವೆಂದು ಸಾರಿದರು. ಉಪವಿಭಾಗಾಧಿಕಾರಿ ಕಚೇರಿ ಬಳಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ, ಡಿ.ವಿ.ಸದಾನಂದ ಗೌಡ, ಗೋವಿಂದ ಕಾರಜೋಳ, ಎಂ.ಪಿ. ರೇಣುಕಾಚಾರ್ಯ ಇತರರು, ಈಗಾಗಲೇ ಬಿಜೆಪಿ ಹಮ್ಮಿಕೊಂಡ ಜನಾಕ್ರೋಶ ಯಾತ್ರೆಗೆ ರಾಜ್ಯವ್ಯಾಪಿ ಜನಬೆಂಬಲ ವ್ಯಕ್ತವಾಗುತ್ತಿದ್ದು, ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಬೆಳಗಾವಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆಂದು ಕಾಲೆಳೆದರು.
ಇದಕ್ಕೂ ಮುನ್ನ ನಗರದ ಹೊರವಲಯದ ಅಪೂರ್ವ ರೆಸಾರ್ಟ್ ಬಳಿ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರನ್ನು ಜಿಲ್ಲೆಯ ಮುಖಂಡರು ಹಾರ ಹಾಕಿ, ಸ್ವಾಗತಿಸಿದರು. ಅನಂತರ ಅಲ್ಲಿಂದ ನೇರವಾಗಿ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ತ್ರಿಶೂಲ್ ಚಿತ್ರ ಮಂದಿರ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ತಲುಲಿ, ಅಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಬಳಿಕ ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ನಂತರ ಎಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಾಯಿತು. ದಾವಣಗೆರೆಯಲ್ಲಿ ಮೂರನೇ ಹಂತದ ಜನಾಕ್ರೋಶ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಇಲ್ಲಿಂದ ಹರಿಹರ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ಬಿಜೆಪಿ ಜನಾಕ್ರೋಶ ಯಾತ್ರೆ ಮುಂದೆ ಸಾಗಿತು.