ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಳೆಹಾನಿಗೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರನ್ನು ಒಳಗೊಂಡ ಎರಡು ತಂಡಗಳನ್ನು ರಚಿಸಲಾಗಿದ್ದು, ವಿಜಯೇಂದ್ರ ನೇತೃತ್ವದ ತಂಡ ಸೋಮವಾರದಿಂದಲೇ ಪ್ರವಾಸ ಆರಂಭಿಸಲಿದೆ.ವಿಜಯೇಂದ್ರ ನೇತೃತ್ವದ ತಂಡ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅಶೋಕ್ ನೇತೃತ್ವದ ತಂಡ ಕಿತ್ತೂರು ಕರ್ನಾಟಕದ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ವಿಜಯೇಂದ್ರ ತಂಡ ಸೋಮವಾರದಿಂದ ಎರಡು ದಿನ ಪ್ರವಾಸ ಕೈಗೊಂಡರೆ ಅಶೋಕ್ ತಂಡ ಅ.3 ಮತ್ತು 4ರಂದು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಈ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಪ್ರವಾಹದಿಂದ ರೈತರು, ಬಡವರು ಕಂಗಾಲಾಗಿದ್ದಾರೆ. ಎರಡು ತಂಡಗಳ ಮೂಲಕ ಮಳೆಹಾನಿ ಪ್ರದೇಶದ ಪರಿಶೀಲನೆ ನಡೆಸುತ್ತೇವೆ. ಅಲ್ಲಿನ ರೈತರ ಸಮಸ್ಯೆ ಆಲಿಸುತ್ತೇವೆ. ಸಿದ್ದರಾಮಯ್ಯನವರ ಸರ್ಕಾರ ಕೇಂದ್ರ ಸರ್ಕಾರವೇ ಪರಿಹಾರ ಕೊಡಲಿ ಅಂತ ಕೈಕಟ್ಟಿ ಕಾಯುತ್ತಾ ಕೂತಿದೆ ಎಂದು ಹರಿಹಾಯ್ದರು.
-ಬಾಕ್ಸ್-ಬಿಜೆಪಿ ತಂಡಗಳ ಮುಖಂಡರುಬಿ.ವೈ.ವಿಜಯೇಂದ್ರ ತಂಡ- ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಭಗವಂತ ಖೂಬಾ, ಬಿ.ಶ್ರೀರಾಮುಲು, ಡಾ.ಉಮೇಶ್ ಜಾಧವ್, ಭಾರತಿ ಶೆಟ್ಟಿ, ಎ.ಎಸ್.ಪಾಟೀಲ್ ನಡಹಳ್ಳಿ (ಸಂಯೋಜಕರು ಪಿ.ರಾಜೀವ್).ಆರ್.ಅಶೋಕ್ ತಂಡ- ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಅರವಿಂದ್ ಬೆಲ್ಲದ, ಪಿ.ಸಿ.ಗದ್ದೀಗೌಡರ್, ಈರಣ್ಣ ಕಡಾಡಿ, ಶಶಿಕಲಾ ಜೊಲ್ಲೆ, ಸಿದ್ದು ಸವದಿ, ಅಭಯ್ ಪಾಟೀಲ್ (ಸಂಯೋಜಕರು ಎನ್.ರವಿಕುಮಾರ್).ಬೀದರ್‌ನ ಮಳೆ ಹಾನಿ ಪ್ರದೇಶಕ್ಕೆ ಸೋಮಣ್ಣ ಭೇಟಿಬಸವಕಲ್ಯಾಣ ತಾಲೂಕಿನ ಬೇಟಬಾಲಕುಂದಾ ಗ್ರಾಮದ ಬಳಿಯ ಬೆಳೆ ಹಾನಿ ಪ್ರದೇಶಕ್ಕೆ ಭಾನುವಾರ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ಕೇವಲ ಕೇಂದ್ರ ಸರ್ಕಾರವನ್ನು ದೂಷಿಸುವುದು ನಿಮ್ಮ ಕರ್ತವ್ಯ ಅಲ್ಲ. ಬೀದರ್ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ 4 ಅಡಿವರೆಗೂ ನೀರು ತುಂಬಿಕೊಂಡಿದ್ದು, ನೀವೇನು ಮಾಡುತ್ತಿದ್ದೀರಿ? ದಯಮಾಡಿ ರೈತರ ನೆರವಿಗೆ ಧಾವಿಸಿ ಎಂದರು.ಪಕ್ಕದ ಮಹಾರಾಷ್ಟ್ರದ ಸಿಎಂ ಫಡ್ನವೀಸ್ ಬೆಳೆ ಹಾನಿ ಸ್ಥಳದಲ್ಲಿ ಹೋಗಿದ್ದಾರೆ. ನೀವು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಳೆ ಇಲ್ಲದೇ ತತ್ತರಿಸುವ ಈ ಭಾಗದಲ್ಲಿ ಎಂದೂ ಆಗದೇ ಇರುವಷ್ಟು ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ಕಾನೂನಿನ ಚೌಕಟ್ಟಿನಲ್ಲಿ ತಕ್ಷಣದಿಂದಲೇ ಪರಿಹಾರ ಕೊಡಿ ಎಂದು ಅಲ್ಲಿನ ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ರೈತರು ಕಂಗಲಾಗಿದ್ದಾನೆ ಎಂದರು.ಮುಂಗಾರು-ಹಂಗಾಮಿನ ಉದ್ದು, ಹೆಸರು, ಸೋಯಾ, ತೊಗರಿ ಏನೇನು ಉಳಿದಿಲ್ಲ. ಇನ್ನೇನು ಕಟಾವು ಮಾಡಬೇಕೆನ್ನುಷ್ಟರಲ್ಲಿ ಮಳೆ ಬಂದು ಎಲ್ಲ ಹೋಗಿದೆ. ಹಿಂಗಾರು ಮಳೆ ಬರುತ್ತೆ ಅಂತ ಅಂದುಕೊಂಡಿದ್ರು ಅದು ಕೂಡ ಸರ್ವನಾಶ ಆಗಿದೆ. ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.ನಾನು ಕೂಡ ಕೇಂದ್ರ ಕೃಷ ಸಚಿವ ಶಿವರಾಜ್ ಸಿಂಗ್ ಚವ್ಹಾಣ ಅವರನ್ನು ಭೇಟಿ ಮಾಡಿ ಒಂದು ತಂಡ ಕಳಿಸಿಕೊಡುವಂತೆ ಕೇಳಿಕೊಳ್ಳುತ್ತೇನೆ. ಸರ್ಕಾರ ರೈತರ ನೆರವಿಗೆ ಬರಬೇಕು. ಕೂಡಲೇ ಸಿಎಂ ಅವರು ವೈಮಾನಿಕ ಸಮೀಕ್ಷೆ ನಡೆಸಬೇಕು. ರೈತರ ಜತೆ ಕೇಂದ್ರ ಸರ್ಕಾರ ಇದೆ ಎಂದು ಹೇಳಿದರು.