ಸಾರಾಂಶ
ಹಾವೇರಿ: ಬಿಜೆಪಿ ಕೇವಲ ರಾಜಕೀಯ ಅಧಿಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಸಮಾಜದ ಸರ್ವರ ಏಳಿಗೆಗಾಗಿ ಸದಾಕಾಲ ಸೇವೆ ಮಾಡುತ್ತದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಸಮಾಜದ ಪರಿವರ್ತನೆಗಾಗಿ ಶ್ರಮಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ತಿಳಿಸಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸೇವಾ ಪಾಕ್ಷಿಕ ಅಭಿಯಾನ- 2025 ಕಾರ್ಯಾಗಾರದಲ್ಲಿ ಮಾತನಾಡಿದರು. ಬಿಜೆಪಿ ಪ್ರತಿವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ. 17ರಿಂದ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅ. 2ರ ವರೆಗೆ ಸೇವಾ ಪಾಕ್ಷಿಕ ಅಭಿಯಾನವನ್ನು ದೇಶಾದ್ಯಂತ ನಡೆಸುತ್ತದೆ. ಈ ಅವಧಿಯಲ್ಲಿ ವಿವಿಧ ಸೇವಾ ಚಟುವಟಿಕೆಗಳ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಪ್ರಯತ್ನ ಮಾಡುತ್ತದೆ. ಈ ವರ್ಷವೂ ಸೇವಾ ಪಾಕ್ಷಿಕ ಅಭಿಯಾನ ಸೆ. 17ರಿಂದ ಆರಂಭವಾಗಲಿದೆ ಎಂದರು.ಜಿಲ್ಲೆಯ ಎಲ್ಲ ಮಂಡಳಗಳಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ವಿಕಸಿತ ಭಾರತ ಚಿತ್ರಕಲಾ ಸ್ಪರ್ಧೆ, ಆರೋಗ್ಯ ಶಿಬಿರ, ಪ್ರದರ್ಶಿನಿ ಹಾಗೂ ಬೌದ್ಧಿಕ ಸಮ್ಮೇಳನ, ಮೋದಿ ವಿಕಾಸ ಮ್ಯಾರಥಾನ, ಪಂಡಿತ್ ದೀನ್ ದಯಾಳ ಉಪಾಧ್ಯಾಯರ ಜನ್ಮದಿನ ಹಾಗೂ ಅ. 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರ ಜನ್ಮದಿನ ಆಚರಿಸಲಾಗುವುದು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ. ನಮ್ಮ ಪಕ್ಷ ಕೇವಲ ಚುನಾವಣೆಗಾಗಿ ಕಾರ್ಯ ಮಾಡುವುದಿಲ್ಲ. ಬದಲಾಗಿ ನಿತ್ಯವೂ ಸಮಾಜದ ಅಭಿವೃದ್ಧಿಗಾಗಿ ಕಾರ್ಯ ಮಾಡುತ್ತದೆ. ಸೇವಾ ಸಪ್ತಾಹ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಲುಪುತ್ತದೆ. ನಮ್ಮ ಎಲ್ಲ ಕಾರ್ಯಕರ್ತರು ಪಕ್ಷದ ಸೇವಾ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಬೇಕು ಹಾಗೂ ಸೇವಾ ಚಟುವಟಿಕೆಗಳ ಮೂಲಕ ಸಮಾಜದ ಪರಿವರ್ತನೆಗಾಗಿ ಶ್ರಮಿಸಬೇಕು ಎಂದರು. ಇದೇ ಸಂಧರ್ಭದಲ್ಲಿ ಮನ್ ಕೀ ಬಾತ್ 125ನೇ ಸಂಚಿಕೆಯಲ್ಲಿ ಅತಿ ಹೆಚ್ಚಿನ ಕಾರ್ಯಕ್ರಮ ವೀಕ್ಷಿಸಿದ ರಾಣಿಬೆನ್ನೂರು ನಗರ ಹಾಗೂ ಗ್ರಾಮೀಣ ಮಂಡಳ ಅಧ್ಯಕ್ಷರಾದ ಮಂಜುನಾಥ ಕಾಟಿ ಹಾಗೂ ಸುಭಾಷ ಶಿರಗೇರಿ ಅವರಿಗೆ ಎನ್. ರವಿಕುಮಾರ ಅವರು ಸನ್ಮಾನಿಸಿದರು.ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕ ಡಾ. ಸಂತೋಷ ಆಲದಕಟ್ಟಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸಹ ಸಂಚಾಲಕ ಚಂದ್ರಣ್ಣ ಹರಿಜನ, ಸಿದ್ದು ಚಿಕ್ಕಬಿದರಿ, ನರಹರಿಕಟ್ಟಿ ಹಾಗೂ ಜಿಲ್ಲೆಯ ರಾಜ್ಯ, ಜಿಲ್ಲಾ, ಮಂಡಲ ಪದಾಧಿಕಾರಿಗಳು ಮೋರ್ಚಾ, ಪ್ರಕೋಷ್ಠದ ಪದಾಧಿಕಾರಿಗಳು ಅಭಿಯಾನ ನಿರ್ವಹಿಸುವ ತಂಡದ ಕಾರ್ಯಕರ್ತರು ಇದ್ದರು. ಕಿರಣ ಕೋಣನವರ ನಿರ್ವಹಿಸಿದರು.