ಬಿಜೆಪಿಗರು ಈಗಲಾದರೂ ಗುಂಡಿ ಮುಚ್ಚಲಿ: ಸಿಎಂ, ಡಿಸಿಎಂ ಟಾಂಗ್‌

| Published : Sep 26 2025, 01:00 AM IST

ಬಿಜೆಪಿಗರು ಈಗಲಾದರೂ ಗುಂಡಿ ಮುಚ್ಚಲಿ: ಸಿಎಂ, ಡಿಸಿಎಂ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಸ್ತೆ ಗುಂಡಿ ಮುಚ್ಚಲಿಲ್ಲ, ಈಗಲಾದರೂ ಮುಚ್ಚಲಿ. ಬಹಳ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ, ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಸ್ತೆ ಗುಂಡಿ ಮುಚ್ಚಲಿಲ್ಲ, ಈಗಲಾದರೂ ಮುಚ್ಚಲಿ. ಬಹಳ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ, ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಗುಂಡಿ ಮುಚ್ಚಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಇಬ್ಬರೂ ನಾಯಕರು ಪ್ರತ್ಯೇಕ ಪ್ರತಿಕ್ರಿಯೆ ನೀಡಿದರು.

ಮುಖ್ಯಮಂತ್ರಿಯವರು ಮಾತನಾಡಿ, ಪಾಪ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಗುಂಡಿ ಮುಚ್ಚಲಿಲ್ಲ. ಈಗ ಮುಚ್ಚುತ್ತಿದ್ದಾರೆ ಮುಚ್ಚಲಿ ಎಂದರು.

ಉಪ ಮುಖ್ಯಮಂತ್ರಿ ಮಾತನಾಡಿ, ಬಿಜೆಪಿಯವರು ಗುಂಡಿ ಮುಚ್ಚುತ್ತಿರುವುದು ಬಹಳ ಒಳ್ಳೆಯ ಕೆಲಸ. ನನ್ನ ಮನೆಯ ಮುಂದೆಯೂ ಮುಚ್ಚಲಿ. ಆರ್.ಅಶೋಕ್ ಅವರಿಗೆ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಲು ಆಗಲಿಲ್ಲ, ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಲಿಲ್ಲ. ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಲಿಲ್ಲ ಎಂದೇ ಜನ ನಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

ರಸ್ತೆಗುಂಡಿ ಮುಚ್ಚಲು ಆಗದವರು ಟನಲ್ ರಸ್ತೆ ಮಾಡಲು ಹೊರಟಿದ್ದಾರೆ ಎನ್ನುವ ಆರ್.ಅಶೋಕ್ ಅವರ ಟೀಕೆ ಬಗ್ಗೆ ಕೇಳಿದಾಗ, ಅವರು ಕೇಂದ್ರದಿಂದ ಬೆಂಗಳೂರಿಗೆ ಒಂದೇ ಒಂದು ರುಪಾಯಿ ಅನುದಾನ ಕೊಡಿಸಿದ್ದಾರೆಯೇ? ಬಿಜೆಪಿಯವರು ಏನೇನೂ ಮಾಡಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಅವರ ಆಡಳಿತಾವಧಿಯಲ್ಲಿ ಆಗಿದ್ದಂತಹ ರಸ್ತೆಗುಂಡಿಗಳನ್ನು ನಾವು ಮುಚ್ಚುತ್ತಿದ್ದೇವೆ ಎಂದರು.

ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸಿ ಗುಂಡಿಗಳನ್ನು ಮುಚ್ಚಿಸಿಕೊಳ್ಳಲಿ. ಅಧಿಕಾರಿಗಳು ಅವರಿಗೂ ಗೌರವ ನೀಡುತ್ತಾರೆ. ನಾವು ಇದಕ್ಕೆ ಬೇಡ ಎಂದು ಹೇಳುತ್ತೇವೆಯೇ? ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಆಗುವುದಿಲ್ಲ. ಅದಕ್ಕೊಂದು ವೈಜ್ಞಾನಿಕ ನಿಯಮವಿದೆ. ಬಿಜೆಪಿಯವರು ಪ್ರತಿಭಟನೆ ವೇಳೆ ಗುಂಡಿ ತುಂಬಿದಂತೆ ಮಾಡಲು ಆಗುವುದಿಲ್ಲ ಎಂದು ಹೇಳಿದರು.