ಹೆಬ್ಬಾರ್ ತವರಿನಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ, ಸರ್ಕಾರದ ವಿರುದ್ಧ ಜನಾಕ್ರೋಶ

| Published : Apr 12 2025, 12:50 AM IST

ಹೆಬ್ಬಾರ್ ತವರಿನಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ, ಸರ್ಕಾರದ ವಿರುದ್ಧ ಜನಾಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಈ ಯಾತ್ರೆಯಲ್ಲಿ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುವುದಿಲ್ಲ ಎನ್ನುವುದು ನಿಶ್ಚಿತವಾಗಿತ್ತು.

ಕಾರವಾರ: ಬಿಜೆಪಿಯಿಂದ ವಿಮುಖರಾಗಿ ಕಾಂಗ್ರೆಸ್ ಅಪ್ಪಿಕೊಂಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ನಿವಾಸದ ಸಮೀಪದಲ್ಲೇ ಬಿಜೆಪಿ ಜನಾಕ್ರೋಶದ ಯಾತ್ರೆಯ ಸಭೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದೆ.

ಪಕ್ಷದ ವೇದಿಕೆಗಳಿಂದ ದೂರ ಇರುವ ಹೆಬ್ಬಾರ್ ತವರಿನಲ್ಲೇ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳುವ ಹಿಂದೆ ಎರಡು ಉದ್ದೇಶ ಇತ್ತು. ಒಂದು ಆಡಳಿತ ಕಾಂಗ್ರೆಸ್ ವಿರುದ್ಧ ಸಮರವಾದರೆ, ಇನ್ನೊಂದು ಕಾಂಗ್ರೆಸ್ಸಿನತ್ತ ವಾಲಿರುವ ಹೆಬ್ಬಾರ್ ಅವರಿಗೊಂದು ಟಕ್ಕರ್ ಕೊಡುವುದು.

ಈ ಯಾತ್ರೆಯಲ್ಲಿ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುವುದಿಲ್ಲ ಎನ್ನುವುದು ನಿಶ್ಚಿತವಾಗಿತ್ತು. ಅವರು ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಿಂದ ಸಾಕಷ್ಟು ದೂರ ಕ್ರಮಿಸಿ ಆಗಿದೆ. ಬಿಜೆಪಿಯ ಯಾವುದೇ ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳದೇ ವರ್ಷವೇ ಉರುಳಿವೆ. ಹಾಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎದುರು ಆಗಾಗ ಪ್ರತ್ಯಕ್ಷರಾಗುತ್ತಾರೆ. ಇದರಿಂದ ಹೆಬ್ಬಾರ್ ತವರಿನಲ್ಲೇ ಬಿಜೆಪಿ ಸಭೆ ನಡೆಸಿದರೂ ಬ್ಯಾನರ್‌ಗಳಲ್ಲಿ ಅವರ ಫೋಟೋ ಕೈಬಿಡಲಾಗಿತ್ತು.

ಆದರೆ, ಹೆಬ್ಬಾರ್ ಮಾತ್ರ ಜನಾಕ್ರೋಶ ಯಾತ್ರೆಯ ಗೊಡವೆಯೇ ಇಲ್ಲವೆಂಬಂತೆ ಕದಂಬೋತ್ಸವದ ಸಿದ್ಧತೆಗಾಗಿ ಬನವಾಸಿ, ಗುಡ್ನಾಪುರದಲ್ಲಿ ಬಿಜಿಯಾಗಿದ್ದರು. ಬಿಜೆಪಿಯಲ್ಲಿ ತಮ್ಮ ಕಾಲು ಎಳೆಯುವವರ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿರುವ ಹೆಬ್ಬಾರ್ ಕಾಂಗ್ರೆಸ್ಸಿನತ್ತ ಹೆಜ್ಜೆ ಇಟ್ಟಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ ಒಂದು ಬಲಿಷ್ಠ ಶಕ್ತಿ ಎನ್ನುವುದು ಬಿಜೆಪಿಗೂ ಗೊತ್ತು. ಆದರೂ ಹೆಬ್ಬಾರ್ ಅವರನ್ನು ಹಣಿಯಲು ಬಿಜೆಪಿ ಜನಾಕ್ರೋಶ ಯಾತ್ರೆಯ ಮೂಲಕ ತಾಲೀಮು ಆರಂಭಿಸಿದೆ.

ವೇದಿಕೆಯಲ್ಲೇ ಶಿವರಾಮ ಹೆಬ್ಬಾರ್ ಕುರಿತು ಪ್ರಸ್ತಾಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬರಲಿರುವ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಏಕೆ ಆಗುವುದಿಲ್ಲ? ಎಂದು ಹೇಳಿದರು.

ಬರಲಿರುವ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ಈಗಲೇ ವೇದಿಕೆ ಸಿದ್ಧವಾದಂತಾಗಿದೆ.

ಪ್ರಮುಖರ ಗೈರು: ಈ ಯಾತ್ರೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಪಕ್ಷದ ಕಾರ್ಯಕ್ರಮದಲ್ಲಿ ಗೌಹಾಟಿಯಲ್ಲಿ ಇರುವುದರಿಂದ ಸಾಧ್ಯವಾಗಲಿಲ್ಲ. ಕುಮಟಾ ಶಾಸಕ ದಿನಕರ ಶೆಟ್ಟಿ ಪುತ್ರಿಯ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಹಮದಾಬಾದ್‌ಗೆ ತೆರಳಿದ್ದರಿಂದ ಗೈರಾದರು. ಬೆಂಗಳೂರಿನಲ್ಲಿ ಪಕ್ಷದ ಎಸ್.ಟಿ. ಮೋರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಧಾನಪರಿಷತ್ ಶಾಸಕ ಶಾಂತಾರಾಮ ಸಿದ್ದಿ ಜನಾಕ್ರೋಶ ಯಾತ್ರೆಯನ್ನು ತಪ್ಪಿಸಿಕೊಂಡರು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಸಹ ಆಗಮಿಸಿರಲಿಲ್ಲ.