ಸಾರಾಂಶ
ಬೆಂಗಳೂರು : ‘ರಸ್ತೆ ಬೇಕೆಂದರೆ ಗ್ಯಾರಂಟಿ ಸ್ಕೀಂ ಬಂದ್’ ಎಂಬ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಯರಡ್ಡಿ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ರಸ್ತೆ ಆಗಬೇಕು ಎಂದರೆ ಅಕ್ಕಿ ಬಿಡಿ ಎಂಬ ಅವರ ಹೇಳಿಕೆ ದುರಹಂಕಾರದ ಮಾತು. ರಾಜ್ಯದಲ್ಲಿ ಹಣಕಾಸಿನ ಸ್ಥಿತಿ ಹದಗೆಟ್ಟಿರುವುದಕ್ಕೆ ಅವರ ಈ ಮಾತೇ ಸಾಕ್ಷಿ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಯರಡ್ಡಿ ಮಾತ್ರವಲ್ಲ, ಕಾಂಗ್ರೆಸ್‌ನ ಬಹುತೇಕ ಶಾಸಕರು ಈ ಮಾತನ್ನೇ ಹೇಳುತ್ತಾರೆ. ಶಿಗ್ಗಾಂವ್‌ನಲ್ಲಿ ನನ್ನ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕರು ಈ ಮಾತನ್ನು ಹೇಳಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ಇದೇ ವೇಳೆ, ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಗ್ಯಾರಂಟಿ ಘೋಷಣೆ ಮಾಡುವಾಗ ಬರೀ ಗ್ಯಾರಂಟಿ ಕೊಡ್ತೇವೆ, ರಸ್ತೆ ಅಭಿವೃದ್ಧಿ ಇಲ್ಲಾ ಎಂದು ಹೇಳಿದ್ರಾ. ಕಾಂಗ್ರೆಸ್ ಸರ್ಕಾರವೇ ಈ ರಾಜ್ಯಕ್ಕೆ ಶಾಪ, ಈ ಸರ್ಕಾರ ತೊಲಗಲಿ ಎಂದು ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಈ ಬಗ್ಗೆ ಕಿಡಿಕಾರಿದ ಶಾಸಕ ಅರವಿಂದ ಬೆಲ್ಲದ, ರಾಯರಡ್ಡಿಯವರು ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರು, ಅನುಭವಿ ರಾಜಕಾರಣಿ. ಸರ್ಕಾರದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಅನ್ನೋದಕ್ಕೆ ಹೀಗೆ ಹೇಳಿದ್ದಾರೆ. ಲೂಟಿ ನಿಲ್ಲಿಸಿದ್ರೆ ತಾನಾಗಿಯೇ ರಾಜ್ಯದ ಅಭಿವೃದ್ಧಿ ಆಗುತ್ತೆ ಎಂದರು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿ, ರಾಯರಡ್ಡಿಯವರು ಹೇಳಿದ್ದು ಸರಿಯಾಗಿದೆ. ಪಾಪ, ಈ ಸರ್ಕಾರದಲ್ಲಿ ದುಡ್ಡು ಎಲ್ಲಿದೆ?. ಇದು ಪಾಪರ್ ಸರ್ಕಾರ. ನಮ್ಮ ಸರ್ಕಾರ ಬಂದಾಗ ರಾಯರಡ್ಡಿಗೆ ಸತ್ಯವಂತ ಪ್ರಶಸ್ತಿ ಕೊಡಸ್ತೀನಿ ಎಂದರು.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಜನರ ಮೂಗಿಗೆ ತುಪ್ಪ ಹಚ್ಚಿ ಲಟ್ಟಿ ಮಾಡೋಕೆ ಬಂದಿದ್ದಿರಾ? ಗ್ಯಾರಂಟಿಗೂ, ಅಭಿವೃದ್ಧಿಗೂ ಏನು ಸಂಬಂಧ. ಈ ಗ್ಯಾರಂಟಿ ಕೂಡ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಸರ್ಕಾರದಲ್ಲಿ ಪ್ರತಿದಿನ ಒಂದೊಂದು ಭ್ರಷ್ಟಾಚಾರ ಹೊರಕ್ಕೆ ಬರ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರದ ದುಸ್ಥಿತಿ ಸಾಕ್ಷಿ: ಎಚ್‌ಡಿಕೆ
ರಾಜ್ಯದ ಕಾಂಗ್ರೆಸ್ ಸರ್ಕಾರದ ದುಸ್ಥಿತಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಹೇಳಿಕೆಯೇ ಸಾಕ್ಷಿ ಎಂದು ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಬೇಕಾದರೆ ಗ್ಯಾರಂಟಿ ಬೇಡ ಎಂದು ಬರೆದುಕೊಡಿ ಎಂಬ ರಾಯರಡ್ಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಗ್ಯಾರಂಟಿ ಕೊಡಿ ಎಂದು ಜನರೇನೂ ಕೇಳಿರಲಿಲ್ಲ. ಅವರಾಗಿಯೇ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ರಾಯರಡ್ಡಿ ಅವರು ಹಲವಾರು ಬಾರಿ ಇಂತಹ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಆ ಹೇಳಿಕೆ ಬಗ್ಗೆ ಟೀಕೆ ಬಂದ ಮೇಲೆ ಮತ್ತೆ ಅದಕ್ಕೆ ಮತ್ತೊಂದು ಸ್ಪಷ್ಟನೆ ಕೊಡುತ್ತಾರೆ. ಅಲ್ಲಿಗೆ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಅವರ ಹೇಳಿಕೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾರೂ ನಿರೀಕ್ಷೆ ಮಾಡಲು ಆಗುವುದಿಲ್ಲ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ ಎಂದು ಕಿಡಿಕಾರಿದರು.
ಹಣಕ್ಕೆ ಕೊರತೆ ಇಲ್ಲ, ಅಭಿವೃದ್ಧಿಗೆ ಕೊರತೆ ಇಲ್ಲ ಎನ್ನುತ್ತೀರಿ. ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ. ಆದರೆ, ಅದಕ್ಕೆ ಹಣ ನೀಡಿಲ್ಲ. 2024ರ ಬಜೆಟ್‌ನಲ್ಲಿ ಒಂದು ಕಾರ್ಯಕ್ರಮ ಘೋಷಣೆ ಮಾಡಿ ಆ ಕಾರ್ಯಕ್ರಮಕ್ಕೆ ದುಡ್ಡು ಇಲ್ಲ ಅಂತ ರದ್ದು ಮಾಡಿದ್ದಾರೆ. ಹೀಗಾಗಿ, ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಕನಸಿನ ಮಾತು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.