ಕ್ರಿಮಿನಲ್‌ ಪರ ನಿಂತಿರುವ ಬಿಜೆಪಿ

| Published : Jan 04 2024, 01:45 AM IST

ಸಾರಾಂಶ

ಈ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನು ಯಾವುದೇ ಒಂದು ಸಮಾಜ, ಜಾತಿಗೆ ಸೀಮಿತವಾಗಿಲ್ಲ, ಇದನ್ನು ಪಾಲಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

- ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರಸಾದ ಅಬ್ಬಯ್ಯ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕ್ರಿಮಿನಲ್‌ಗಳ ಪರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಕೇವಲ ರಾಜಕೀಯ ಲಾಭಕ್ಕಾಗಿ ಓರ್ವ ರೌಡಿಶೀಟರ್ ಪರವಾಗಿ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಇದು ಬಿಜೆಪಿಯ ಹತಾಶೆಯ ಭಾವನೆ ತೋರಿಸುತ್ತದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರನನ್ನು ಅನಗತ್ಯವಾಗಿ ಬಂಧಿಸಲಾಗಿದೆ ಎಂದು ಬಿಜೆಪಿ ಬಿಂಬಿಸುತ್ತಿದೆ. ಈ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನು ಯಾವುದೇ ಒಂದು ಸಮಾಜ, ಜಾತಿಗೆ ಸೀಮಿತವಾಗಿಲ್ಲ, ಇದನ್ನು ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.

ಜಾತಿ, ಧರ್ಮದ ಬಣ್ಣ:

ಶಹರ ಪೊಲೀಸ್ ಠಾಣೆಯಲ್ಲೇ ಸದ್ಯ 61 ಹಳೆಯ ಪ್ರಕರಣಗಳಿವೆ. ಅದರಲ್ಲಿ ರಾಮಜನ್ಮಭೂಮಿ ಹೋರಾಟದ ದೊಂಬಿ ಪ್ರಕರಣ ಒಂದು. ಇದರಲ್ಲಿ 13 ಜನರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಬಿಜೆಪಿ ರೌಡಿಶೀಟರ್ ಪರವಾಗಿ ನಿಂತು ಆತ ಶ್ರೀರಾಮನ ಭಕ್ತ ಎಂದು ಜಾತಿ, ಧರ್ಮದ ಬಣ್ಣ ಬಳಿಯುತ್ತಿರುವುದು ವಿಷಾದನೀಯ ಎಂದರು.

ಈಗಾಗಲೇ ಶ್ರೀಕಾಂತ ಮೇಲೆ ರೌಡಿಶೀಟರ್ ಸೇರಿದಂತೆ 9 ಪ್ರಕರಣಗಳಿವೆ. ಅದರಲ್ಲಿ ಕಳೆದ ವರ್ಷ ಬಿಜೆಪಿ ರೌಡಿಶೀಟರ್ ಪ್ರಕರಣವನ್ನು ಖುಲಾಸೆಗೊಳಿಸಿದೆ. ಬಿಜೆಪಿಯವರಿಗೆ ಕ್ರಿಮಿನಲ್‌ಗಳ ಮೇಲೆ ಪ್ರೀತಿ ಇದ್ದರೆ ಈ ಹಿಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇತ್ತು. ಅವಾಗಲೇ ತಮ್ಮ ಭಕ್ತರ ಮೇಲಿನ ಪ್ರಕರಣಗಳನ್ನು ಏಕೆ ಖುಲಾಸೆಗೊಳಿಸಲಿಲ್ಲ, ಬಿಜೆಪಿಯವರಿಗೆ ತಮ್ಮ ಕಾರ್ಯಕರ್ತರ ಮೇಲೆ ಇಂತಹ ಪ್ರಕರಣಗಳು ಇರಬೇಕು. ಅವರು ತಮ್ಮ ಹಿಂದೆ ಓಡಾಟ ನಡೆಸಬೇಕು, ಅದರ ಲಾಭ ಪಡೆಯುವ ದುರುದ್ದೇಶ ಎದ್ದು ಕಾಣುತ್ತಿದೆ ಎಂದು ಹರಿಹಾಯ್ದರು.

ಬೆಳಗಾವಿ ಅಧಿವೇಶನದಲ್ಲಿ ಆರ್. ಅಶೋಕ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.‌ ಈಗ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಅವರೊಬ್ಬರೇ ರಾಮಭಕ್ತರಾ?:

ರಾಮ ಭಕ್ತರಿದ್ದೇವೆ ಅಂದರೆ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ಹಾಕಬಾರದಾ?. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಸ್ತವ ಅರಿಯದೇ ಬರೀ ರಾಜಕೀಯವಾಗಿ ಮಾತನಾಡುತ್ತಾರೆ. ಅವರೊಬ್ಬರೇ ನಾ ಶ್ರೀರಾಮನ ಭಕ್ತರು?. ನಾವೆಲ್ಲರೂ ಶ್ರೀರಾಮನ ಭಕ್ತರೇ ಎಂಬುದನ್ನು ಬಿಜೆಪಿ ಅರಿತೊಕೊಳ್ಳಲಿ. ಹಳೇ ಹುಬ್ಬಳ್ಳಿ ಗಲಭೆಯಲ್ಲಿನ ಅಮಾಯಕರನ್ನು ಬಿಡಲು ಹೇಳಿದ್ದೇನೆಯೇ ಹೊರತು ಎಲ್ಲರನ್ನು ಬಿಡಲಿ ಎಂದು ಹೇಳಿಲ್ಲ ಎಂದರು.