ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ದೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಿ.30 ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಡಿ.30 ರಂದು ಸಂಜೆ 5 ಕ್ಕೆ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ರಾಜ್ಯಾಧ್ಯಕ್ಷರಾದ ಮೇಲೆ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ನಮ್ಮೆಲ್ಲರ ಕೋರಿಕೆ ಮೇರೆಗೆ ಅವರು ಅಂದು ಮಧ್ಯಾಹ್ನ ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದು, ಜಿಲ್ಲಾ ಬಿಜೆಪಿಯಿಂದ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದರು.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಯುವಸಮೂಹದಲ್ಲಿ ಹೊಸ ಉತ್ಸಾಹ ಮೂಡಿದೆ. ಜಿಲ್ಲೆಗೆ ಅವರ ಆಗಮನ ಎಲ್ಲರ ಹುಮ್ಮಸ್ಸು ಇಮ್ಮಡಿಗೊಳಿಸಿದೆ. ಸಮಾರಂಭಕ್ಕೆ ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ಹಾಲಿ, ಮಾಜಿ ನಾಯಕರು, ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ನಿಯಮದಂತೆ ಮೂರು ವರ್ಷಕ್ಕೊಮ್ಮೆ ಸ್ಥಾಮಾನಗಳು, ಮೋರ್ಚಗಳ ಬದಲಾವಣೆಯಾಗುತ್ತದೆ. ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ ನಂತರ ಮೋರ್ಚಾಗಳ ಆಯ್ಕೆಯಾಗುತ್ತದೆ. ಸಂಘಟನಾ ಶಕ್ತಿ ಹೊಂದಿರುವ, ಪಕ್ಷಕ್ಕಾಗಿ ಸಮಯ ಕೊಡುವವರನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದರೂ ಬಿಜೆಪಿ ನಾಯಕರು ಮೌನವಹಿಸಿರುವ ಕುರಿತು ಪ್ರತಿಕ್ರಿಯಿಸಿ, ಎಲ್ಲವೂ ವರಿಷ್ಟರ ಗಮನಕ್ಕಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ವರಿಷ್ಟರ ಸೂಚನೆಯಿದೆ ಎಂದರು.ಈ ವೇಳೆ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ವಕ್ತಾರ ಸುರೇಶ ಬಿರಾದಾರ, ಮುಖಂಡ ಕಾಸೂಗೌಡ ಬಿರಾದಾರ, ವಿಜುಗೌಡ ಬಿರಾದಾರ ಮುಂತಾದವರು ಇದ್ದರು.