ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ಬಸವೇಶ್ವರ ಮಂಗಲ ಭವನದಲ್ಲಿ ಭಾರತೀಯ ಜನತಾ ಪಕ್ಷದ ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದಿಂದ ನಡೆದ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದೆ. ಜಿಲ್ಲೆಯ ಬಿಜೆಪಿ ಎಲ್ಲ ಮುಖಂಡರ ಸಹಕಾರದಿಂದ, ಜನರ ಬೆಂಬಲದಿಂದ ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಬಾಗಲಕೋಟೆಯಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ಅವಶ್ಯವಾಗಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಏಕೈಕ ಕನಸಿನ ಚುನಾವಣೆ ಇದಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆಗಿರುವ ಅನೇಕ ಅಭಿವೃದ್ಧಿ ಪರ ಕೆಲಸಗಳ ಬಗ್ಗೆ ನನಗೆ ತೃಪ್ತಿಯಿದೆ. ನಾನು ವಿವಿಧ ಯೋಜನೆಗಳ ಮೂಲಕ ಬೇರೆ ಬೇರೆ ಹಂತದಲ್ಲಿ ಅನೇಕ ಹುದ್ದೆಗಳ ಜವಾಬ್ದಾರಿ ಮೂಲಕ ಜಿಲ್ಲೆಗೆ ಪ್ರಮಾಣಿಕ ಕೊಡುಗೆ ನೀಡಿದ್ದೇನೆ. ನಾನು ಮಾಡಿದ ಕೆಲಸಗಳು ಜನರಿಗೆ ತಲುಪಿವೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಯೋಜನೆಗಳಿಂದಾಗಿ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ದೇಶದ ಭದ್ರತೆಗಾಗಿ ಮೋದಿ ಅವಶ್ಯವಾಗಿದ್ದಾರೆ. ನಿಜ ಭಾರತದ ಕನಸು ನನಸಾಗಲು ಕೇಂದ್ರದಲ್ಲಿ ಬಿಜಿಪಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ನರೇಂದ್ರ ಮೋದಿಯವರ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕಿದೆ. ದೇಶದಲ್ಲಿ ಮಹಿಳೆಯರಿಗೆ ಶೇ.33% ಮಿಸಲಾತಿ ಕೊಟ್ಟಿರುವುದು ಬಿಜೆಪಿ. ರಸ್ತೆ, ರೈಲು, ಕೃಷಿ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದರು.
ಬಡವರಿಗೆ, ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣ, ಸಿಎಎ ಜಾರಿ, ತ್ರಿವಳಿ ತಲಾಕ್ ನಿಷೇಧ, ರಾಷ್ಟ್ರೀಯ ಶಿಕ್ಷಣ ನೀತಿ, ಮುಂದೆ ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವಲ್ಲಿ ಸಿದ್ಧರಾಗಿದ್ದಾರೆ. ದೇಶದ ಭದ್ರತೆ, ದೇಶದ ಸಮಗ್ರ ಅಭಿವೃದ್ಧಿಗೆ ಮೋದಿ ಅವಶ್ಯವಾಗಿದ್ದಾರೆ. ಎಲ್ಲ ಬಿಜೆಪಿ ಕಾರ್ಯಕರ್ತರರು ಚುನಾವಣೆಯಲ್ಲಿ ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಬೇಕು. ಈ ಮೂಲಕ ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದರು.ಸಭೆಯಲ್ಲಿ ಬೆಳಗಾವಿ ವಿಭಾಗಿಯ ಸಹಪ್ರಭಾರಿ ಬಸವರಾಜ ಯಂಕಂಚಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಮುಖಂಡ ಜಿ.ಎನ್. ಪಾಟೀಲ, ಲಕ್ಷ್ಮೀ ನಾರಾಯಣ ಕಾಸಟ್, ಅಶೋಕ ಲಿಂಬಾವಳಿ, ರಾಜು ರೇವಣಕರ, ಜಯಂತ ಕುರಂದವಾಡ, ಸತ್ಯ ನಾರಾಯಣ ಹೇಮಾದ್ರಿ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಶಿವಪುತ್ರಪ್ಪ ಕಣಗಿ, ಸಂಗಣ್ಣ ಕಲಾದಗಿ, ಬಸವರಾಜ ಅವರಾದಿ, ಸದಾನಂದ ನಾರಾ, ವೀರಣ್ಣ ಹಳೆಗೌಡರ, ರಾಮಣ್ಣ ಜುಮನಾಳ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಸುಜಾತಾ ತತ್ರಾಣಿ, ಶಿವಲೀಲಾ ಪಟ್ಟಣಶೆಟ್ಟಿ, ಶಶಿಕಲಾ ಮಜ್ಜಿಗೆ, ಶೋಭಾ ರಾವ್, ಸುಜಾತಾ ಶಿಂಧೆ, ಸವಿತಾ ಲಂಕೆನ್ನವರ, ಸಂಗಯ್ಯ ಸರಗಣಾಚಾರಿ, ಸಿ.ವಿ.ಕೋಟಿ, ಉಮೇಶ ಹಂಚಿನಾಳ ಸೇರಿದಂತೆ ನಗರ ಹಾಗೂ ಗ್ರಾಮೀಣ ಕಾರ್ಯಕರ್ತರು ಭಾಗವಹಿಸಿದ್ದರು.