ವಿಜಯನಗರ ಜಿಲ್ಲೆಯಲ್ಲೂ ಬಿಜೆಪಿಗೆ ಭಾರೀ ಹಿನ್ನಡೆ

| Published : Jun 05 2024, 12:30 AM IST

ಸಾರಾಂಶ

ಬಳ್ಳಾರಿಯಿಂದ ಇಬ್ಭಾಗಗೊಂಡು ರಚನೆಯಾಗಿರುವ ವಿಜಯನಗರ ಜಿಲ್ಲೆಯಲ್ಲೇ ಬಿಜೆಪಿಗೆ ಈ ಬಾರಿ ಹಿನ್ನಡೆಯಾಗಿದೆ.

ಹೊಸಪೇಟೆ: ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳಿಗೆ ವಿಜಯನಗರ ಜಿಲ್ಲೆಗಳ ನಾಲ್ಕು ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಿದ್ದು, ಈ ಕ್ಷೇತ್ರಗಳ ಮತದಾರರು ಈ ಬಾರಿ ಬಿಜೆಪಿಗೆ ಕೈಕೊಟ್ಟಿದ್ದಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರ 2004ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿತ್ತು. ಆದರೆ, ಈ ಬಾರಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸಂಡೂರಿನ ಶಾಸಕ ಈ. ತುಕಾರಾಂ ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ತನ್ನ ಕೋಟೆಯನ್ನು ಮತ್ತೆ ಭದ್ರಪಡಿಸಿಕೊಂಡಿದೆ.ಬಿಜೆಪಿಗೆ ಹಿನ್ನಡೆ:

ಬಳ್ಳಾರಿಯಿಂದ ಇಬ್ಭಾಗಗೊಂಡು ರಚನೆಯಾಗಿರುವ ವಿಜಯನಗರ ಜಿಲ್ಲೆಯಲ್ಲೇ ಬಿಜೆಪಿಗೆ ಈ ಬಾರಿ ಹಿನ್ನಡೆಯಾಗಿದೆ. ಜಿಲ್ಲೆಯ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಈ.ತುಕಾರಾಂ 76075 ಮತಗಳನ್ನು ಗಳಿಸಿದರೆ, ಬಿಜೆಪಿಯ ಬಿ.ಶ್ರೀರಾಮುಲು 67932 ಮತಗಳನ್ನು ಪಡೆದಿದ್ದಾರೆ. 8,443 ಮತಗಳ ಮುನ್ನಡೆಯನ್ನು ಕಾಂಗ್ರೆಸ್‌ ಪಡೆದಿದೆ.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 97,103 ಮತಗಳನ್ನು ಗಳಿಸಿದರೆ, ಬಿಜೆಪಿ 84,903 ಪಡೆದಿದೆ. 12,200 ಮುನ್ನಡೆಯನ್ನು ಕಾಂಗ್ರೆಸ್‌ ಪಡೆದಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 82,992 ಮತಗಳನ್ನು ಪಡೆದರೆ, ಬಿಜೆಪಿ 74,447 ಮತಗಳನ್ನು ಪಡೆದಿದೆ. ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ 8,545 ಮತಗಳ ಮುನ್ನಡೆ ಗಳಿಸಿದೆ.

ಇನ್ನು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 89,955 ಮತಗಳನ್ನು ಪಡೆದರೆ, ಬಿಜೆಪಿ 90,120 ಮತಗಳನ್ನು ಗಳಿಸಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 165 ಮತಗಳ ಅಲ್ಪ ಮುನ್ನಡೆ ಗಳಿಸಿಕೊಂಡಿದೆ.

ಒಗ್ಗಟ್ಟಿನ ಮಂತ್ರ:

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಒಳ ಜಗಳವನ್ನು ಮರೆತು ಒಗ್ಗಟ್ಟಿನ ಮಂತ್ರವನ್ನು ಜಪಿಸಿದೆ. ಅದರಲ್ಲೂ ವಿಜಯನಗರ ಜಿಲ್ಲಾ ಕಾಂಗ್ರೆಸ್‌ನ ಕೈ ಮುಖಂಡರಲ್ಲೇ ತಾಳ, ಮೇಳ ಇರಲಿಲ್ಲ. ಆದರೆ, ಇದೆಲ್ಲವನ್ನು ಬದಿಗೊತ್ತಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌, ಶಾಸಕರಾದ ಎಚ್.ಆರ್‌. ಗವಿಯಪ್ಪ, ಡಾ. ಎನ್‌.ಟಿ. ಶ್ರೀನಿವಾಸ್‌, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಎಸ್‌. ಭೀಮಾನಾಯ್ಕ ಅವರು ಒಗ್ಗಟ್ಟು ಪ್ರದರ್ಶಿಸಿ ತುಕರಾಂ ಅವರ ಗೆಲುವಿನಲ್ಲಿ ಶ್ರಮಿಸಿದ್ದಾರೆ.

ವಿಧಾನಸಭೆಯಲ್ಲಿ ಸೋತ ಕ್ಷೇತ್ರದಲ್ಲೂ ಲೀಡ್‌:

ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರಾಭವಗೊಂಡಿತ್ತು. ಹಡಗಲಿ ಕ್ಷೇತ್ರದಲ್ಲಿ ಬಿಜೆಪಿಯ ಕೃಷ್ಣ ನಾಯ್ಕ ಶಾಸಕರಾಗಿ ಆಯ್ಕೆಯಾದರೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ನೇಮರಾಜ್‌ ನಾಯ್ಕ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಎರಡು ಕ್ಷೇತ್ರಗಳಲ್ಲೂ ಈ ಬಾರಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಹಾಗಾಗಿ ಸೋತ ಕ್ಷೇತ್ರದಲ್ಲೂ ಮುನ್ನಡೆ ಲಭಿಸಿದೆ ಎಂದು ಕಾಂಗ್ರೆಸ್‌ ಪಾಳಯದಲ್ಲಿ ಉತ್ಸಾಹ ಗರಿಗೆದರಿದೆ.

ಕೈ ಹಿಡಿದ ಗ್ಯಾರಂಟಿಗಳು:

ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಗೆ ಮತದಾರ ಮನಸೋತಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಸಪೇಟೆಗೆ ಆಗಮಿಸಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರೂ ಮತದಾರಪ್ರಭು ಮಾತ್ರ ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ಮೋದಿಯೇ ಗ್ಯಾರಂಟಿ ಎಂದು ಪ್ರಧಾನಿ ಪ್ರಚಾರ ಮಾಡಿದರೂ ಸಿದ್ದರಾಮಯ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಮತದಾರ ಪ್ರಭು ಮಾರು ಹೋಗಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಕಾಂಗ್ರೆಸ್‌ ಒಗ್ಗಟ್ಟಿನಿಂದ ಕೆಲಸ ಮಾಡಿದರ ಫಲವಾಗಿ ಈ ಫಲಿತಾಂಶ ಬಂದಿದೆ. ಕಾರ್ಯಕರ್ತರು ಹಾಗೂ ಮುಖಂಡರು ಬಿಸಿಲಿನಲ್ಲೂ ಬೆವರು ಹರಿಸಿದ್ದೇವೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಜನ ಮತ ನೀಡಿದ್ದಾರೆ. ಮತ್ತೆ ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ಭದ್ರಕೋಟೆಯನ್ನಾಗಿಸಿದೆ ಎನ್ನುತ್ತಾರೆ ಕಾಂಗ್ರೆಸ್‌ನ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌.ಮತದಾರರು ನೀಡಿದ ತೀರ್ಪಿಗೆ ನಾವು ಮನ್ನಣೆ ನೀಡುತ್ತೇವೆ. ನಾವು ಶ್ರಮ ಹಾಕಿದ್ದೇವೆ. ಆದರೂ ಮತದಾರರು ಇಂತಹ ತೀರ್ಪು ನೀಡಿದ್ದಾರೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗುತ್ತಿದೆ. ನಾವು ಈ ಸೋಲಿನ ಬಗ್ಗೆ ಶೀಘ್ರವೇ ಆತ್ಮಾವಲೋಕನ ಸಭೆ ಕರೆದು ಚರ್ಚಿಸುತ್ತೇವೆ ಎನ್ನುತ್ತಾರೆ ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌.