ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿಗಳೇ ಮೇಯರ್ ಹಾಗೂ ಉಪಮೇಯರ್ ಅಲಂಕರಿಸಿದ್ದಾರೆ. ಗೆಲುವಿನ ಲೆಕ್ಕಾಚಾರ ನೋಡಿದರೆ ಖಂಡಿತವಾಗಿ ಇದು ಬಿಜೆಪಿಯ ಗೆಲುವೋ ಅಥವಾ ಬಿಆರ್‌ಪಿಯ ಗೆಲುವೋ ಎಂಬುದು ಗೊಂದಲ ಉಂಟು ಮಾಡಿದೆ. ಜೊತೆಗೆ ಈ ಗೆಲುವಿಗಾಗಿ ಕಾಣದ ಕಾಂಗ್ರೆಸ್ ಕೈಗಳು ಕೆಲಸ ಮಾಡಿರುವ ಶಂಕೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿಗಳೇ ಮೇಯರ್ ಹಾಗೂ ಉಪಮೇಯರ್ ಅಲಂಕರಿಸಿದ್ದಾರೆ. ಗೆಲುವಿನ ಲೆಕ್ಕಾಚಾರ ನೋಡಿದರೆ ಖಂಡಿತವಾಗಿ ಇದು ಬಿಜೆಪಿಯ ಗೆಲುವೋ ಅಥವಾ ಬಿಆರ್‌ಪಿಯ ಗೆಲುವೋ ಎಂಬುದು ಗೊಂದಲ ಉಂಟು ಮಾಡಿದೆ. ಜೊತೆಗೆ ಈ ಗೆಲುವಿಗಾಗಿ ಕಾಣದ ಕಾಂಗ್ರೆಸ್ ಕೈಗಳು ಕೆಲಸ ಮಾಡಿರುವ ಶಂಕೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಪಾಲಿಕೆಯ 22ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಕಳೆದ ಜ.27 ರಂದೇ ಚುನಾವಣೆ ನಡೆದಿತ್ತು. ಮತದಾನದ ಪ್ರಕ್ರಿಯೆ ಹಾಗೂ ಸದಸ್ಯರ ಆಸ್ತಿ ಘೋಷಣೆ ಸೇರಿದಂತೆ ಕೆಲ ವ್ಯಾಜ್ಯಗಳು ನ್ಯಾಯಾಲಯದಲ್ಲಿದ್ದ ಕಾರಣ ಫಲಿತಾಂಶ ಪ್ರಕಟವಾಗಿರಲಿಲ್ಲ. ಇದೀಗ ಕಲಬುರಗಿ ಹೈಕೋರ್ಟ್ ಆದೇಶದ ಮೇಲೆ ಫಲಿತಾಂಶ ಪ್ರಕಟವಾಗಿದ್ದು, ಅಂತ್ಯದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಪಾಲಿಕೆಯ ಚುಕ್ಕಾಣಿ ಹಿಡಿದುಕೊಂಡಿದೆ.ಬಿಜೆಪಿಗೆ ಐತಿಹಾಸಿಕ ದಿನ:
22ನೇ ಮಹಾಪೌರರಾಗಿ ಬಿಜೆಪಿಯ ಎಂ.ಎಸ್.ಕರಡಿ 24 ಮತಗಳನ್ನು ಹಾಗೂ ಉಪಮಹಾಪೌರರಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಜಾಧವ 22 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಜನವರಿಯಲ್ಲಿ ಜರುಗಿದ ಚುನಾವಣೆಯ ಫಲಿತಾಂಶವನ್ನು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನವರ ಅಧಿಕೃತವಾಗಿ ಘೋಷಿಸಿದರು. ಇಂದಿನಿಂದ ಒಂದು ವರ್ಷದವರೆಗೆ ಅವರ ಅಧಿಕಾರಾವಧಿ ಇರಲಿದೆ.ಅಧಿಕಾರದಲ್ಲಿ ಬಿಜೆಪಿಯೋ? ಬಿಆರ್‌ಪಿಯೋ?:
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರು ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗಿದ್ಧಾರೆ. ಈ ಮಧ್ಯೆ ಬಿಜೆಪಿ ಪದಾಧಿಕಾರಿಗಳಲ್ಲಿ ಸಂಭ್ರಮ ಕಾಣದೇ ಇದೀಗ ಬಣ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಸಂಭ್ರಮದವರೆಗೂ ಎಲ್ಲಿಯೂ ಒಂದೇ ಒಂದು ಬಿಜೆಪಿ ಧ್ವಜ ಹಾರಾಡಿದ್ದು ಕಾಣಲಿಲ್ಲ. ಬದಲಾಗಿ ಎಲ್ಲೆಡೆ ಬಿಆರ್‌ಪಿ (ಬಸನಗೌಡ ರಾಮನಗೌಡ ಪಾಟೀಲ) ಬಾವುಟಗಳೇ ರಾರಾಜಿಸಿದ್ದವು. ಜೊತೆಗೆ ಆಯ್ಕೆಯಾದವರಿಂದ ಹಿಡಿದು ಸೇರಿದ್ದ ಕಾರ್ಯಕರ್ತರ ಕೊರಳಿನಲ್ಲೂ ಬಿಆರ್‌ಪಿ ಹಾಗೂ ಬರೀ ಕೇಸರಿ ಶಾಲುಗಳೇ ಕಾಣಿಸುತ್ತಿದ್ದವು.ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ:
ಒಟ್ಟು 35 ಸದಸ್ಯರ ಬಲದ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಂಐಎಂ 2, ಜೆಡಿಎಸ್ 1 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಬಿಜೆಪಿಯ 17 ಸದಸ್ಯರ ಜೊತೆಗೆ ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಕೇಶವಪ್ರಸಾದ ಮತದಾನ ಮಾಡಿದ್ದರು. ಇನ್ನೊಂದೆಡೆ ಕಾಂಗ್ರೆಸ್‌ನ 10 ಜನ ಸದಸ್ಯರು ಹಾಗೂ ಸಚಿವ ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ತಿಪ್ಪಣ್ಣ ಕಮಕನೂರ, ಜಗದೇವ ಗುತ್ತಿಗೆದಾರ, ಬಾಕಲಿಶ ಬಾನು, ಎ.ವಸಂತಕುಮಾರ ಮತದಾನ ಮಾಡಿದ್ದರು.ಚುನಾವಣೆ ಫಲಿತಾಂಶ ಪ್ರಕಟದ ವೇಳೆ ಹಾಜರಿದ್ದ ಶಾಸಕ ಯತ್ನಾಳಗೆ ಎಲ್ಲ ಸದಸ್ಯರು ಅಭಿನಂದಿಸಿದರು. ಬಿಜೆಪಿಯಿಂದ ಉಚ್ಚಾಟನೆಗೊಂಡರೂ ಯತ್ನಾಳ ನಮ್ಮ ನಾಯಕರು. ಅವರಿಂದಲೇ ನಾವೆಲ್ಲ ಆಯ್ಕೆಯಾಗಿದ್ದೇವೆ ಎಂದು ಶಾಸಕರಿಗೆ ಜೈಕಾರ ಹಾಕಿದರು.
-----ಕೋಟ್:
ಜನೇವರಿಯಲ್ಲಿ ನಡೆದ ಚುನಾವಣೆಯಲ್ಲಿ ನಾವೇ ಗೆಲುವು ಕಂಡಿದ್ದೇವೆ. ಬಿಜೆಪಿಗೆ ಅಧಿಕಾರ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಧಿಕಾರ ದುರುಪಯೋಗ ಮಾಡಿಕೊಂಡು ಷಡ್ಯಂತ್ರ ಮಾಡಿದ್ದರು. ಆದರೆ, ಅವರದ್ದೇ ಪಕ್ಷದ ಮತ್ತೋರ್ವ ಸಚಿವರು ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದರು. ಬಿಜೆಪಿ ಪಾಲಿಕೆ ಅಧಿಕಾರಕ್ಕೇರಿದರೂ ಯಾವುದೇ ಪದಾಧಿಕಾರಿಗಳು ಆಗಮಿಸಿಲ್ಲ. ಅವರು ನಕಲಿ, ಇಲ್ಲಿರುವವರೇ ಓರಿಜಿನಲ್. ಬಿಜೆಪಿಯ ಪದಾಧಿಕಾರಿಗಳು ನಕಲಿ. 17 ಜನ ಬಿಜೆಪಿ ಸದಸ್ಯರು ಆಯ್ಕೆಯಾಗಲು ಶ್ರಮಿಸಿದ್ದೇವೆ. ಆದರೆ, ಚುನಾವಣೆಯಲ್ಲಿ ಸೋತವರೊಂದಿಗೆ ಬಿಜೆಪಿ ಪದಾಧಿಕಾರಿಗಳು ಓಡಾಡುತ್ತಿದ್ದಾರೆ.ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ.
----ಈ ಬಾರಿ ಅಧಿಕಾರಕ್ಕೆ ಬಂದ್ದಿದ್ದು ಉತ್ತಮವಾಗಿ ಕೆಲಸ ಮಾಡುತ್ತೇವೆ. ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಇತ್ತ ಆಗಮಿಸಿಲ್ಲ. ಅವರಿಗೂ ಹಂಬಲ ಇರಬೇಕು, ಈ ಹಂಬಲ ಅವರಿಗೆ ಉಳಿದಿಲ್ಲ. ಶಾಸಕ ಯತ್ನಾಳ ಅವರ ಶ್ರಮದಿಂದ ನಾವೆಲ್ಲ ಆಯ್ಕೆಯಾಗಿ ಬಂದಿದ್ದೇವೆ. ಯತ್ನಾಳರು ಸದ್ಯ ಬಿಜೆಪಿಯಲ್ಲಿಲ್ಲ, ಆದರೆ ಇಂದು ಅವರು ನಮ್ಮ ಜೊತೆಗೆ ಬಂದಿದ್ದಾರೆ. ಅದಕ್ಕಾಗಿ ಖುಷಿ ಪಡುತ್ತೇವೆ.- ಎಂ.ಎಸ್.ಕರಡಿ, ನೂತನ ಮಹಾಪೌರ.