ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸಿಎಂ ಮತ್ತು ಆರೋಗ್ಯ ಸಚಿವರ ಹೇಳಿಕೆ ಅತ್ಯಂತ ಅಮಾನವೀಯವಾದುದು.
ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿ, ಸರ್ಕಾರದ ವೈಫಲ್ಯ, ಬಿಟ್ಟಿ ಭಾಗ್ಯದಿಂದ ಆರ್ಥಿಕ ವ್ಯವಸ್ಥೆಯ ಮೇಲಾದ ಪರಿಣಾಮ ಖಂಡಿಸಿ ಬೃಹತ್ ಪ್ರತಿಭಟನೆ ರಾಜ್ಯಾದ್ಯಂತ ನಡೆಯುತ್ತಿಲಿದೆ. ಅದೇ ರೀತಿ ಪಟ್ಟಣದಲ್ಲೂ ನ. 30ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಹಾಯ ನೀಡುವ ಉದ್ದೇಶದಿಂದ ಹಾಲಿನ ದರ ಏರಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ ನಾಲ್ಕೂವರೆ ಕೋಟಿ ರೈತರಿಗೆ ಹಾಲಿನ ಸಬ್ಸಿಡಿ ಕೊಡುವುದು ಬಾಕಿ ಇದೆ. ಮೊಸರು, ಬೆಣ್ಣೆಗೂ ಬೆಲೆ ಏರಿಸಲಾಗಿದೆ. ಇನ್ನೊಂದೆಡೆ ಭೀಕರ ಬರಗಾಲ ಬಂದಿದೆ. ರೈತರಿಗೆ ಎರಡೂವರೆ ಸಾವಿರ ರು. ಪರಿಹಾರ ಎಂದು ಘೋಷಿಸಿ, ಈವರೆಗೂ ನೀಡಿಲ್ಲ. ರೈತರಿಗೆ ಎರಡೂವರೆ ಸಾವಿರ ನೀಡಿದರೆ ಸಾಕೇ? ರಸ್ತೆಯಲ್ಲಿ ಸಂಚಾರ ಮಾಡುವ ಸ್ಥಿತಿ ಇಲ್ಲ. ಸಿಲಿಕಾನ್ ಸಿಟಿ ಬೆಂಗಳೂರಲ್ಲೇ ರಸ್ತೆಗೆ ಹೊಂಡ ಮುಚ್ಚಲಾಗಲಿಲ್ಲ ಎಂದರು.ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸಿಎಂ ಮತ್ತು ಆರೋಗ್ಯ ಸಚಿವರ ಹೇಳಿಕೆ ಅತ್ಯಂತ ಅಮಾನವೀಯವಾದುದು ಎಂದರು.
ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಸ್ಥಳೀಯ ಆಡಳಿತ, ಭ್ರಷ್ಟಾಚಾರದ ಆಗರವಾಗಿದೆ. ಪಪಂನಲ್ಲಿ ಜನರ ಯಾವ ಕೆಲಸವೂ ಆಗುತ್ತಿಲ್ಲ. ಜನ ರೋಸಿ ಹೋಗಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಲಂಕಾರ ದೀಪ ಬಂತು. ಆದರೆ ರಸ್ತೆಯುದ್ದಕ್ಕೂ ಕತ್ತಲೆ ಆವರಿಸುವ ಸ್ಥಿತಿ ಬಂದಿದೆ. ಹೀಗೆ ಯಲ್ಲಾಪುರ ಹತ್ತಾರು ಸಮಸ್ಯೆಗಳ ಆಗರವಾಗಿದೆ ಎಂದರು.ಸಂಘಟನೆಯ ಪ್ರಮುಖರಾದ ಬಾಲಕೃಷ್ಣ ನಾಯಕ ಮಾತನಾಡಿದರು. ಪ್ರಮುಖರಾದ ಗಣೇಶ ಪಾಟಣಕರ, ಸೋಮು ನಾಯ್ಕ, ಹೀರು ಸಿಂಧೆ ಮತ್ತಿತರರು ಉಪಸ್ಥಿತರಿದ್ದರು.