ಕನಕದಾಸರು ಶ್ರೇಷ್ಟ ಕವಿ, ಸಂತರಾಗಿದ್ದು, ಅವರ ಆದರ್ಶಗಳ ಪಾಲನೆ ಮಾಡಬೇಕಾಗಿದೆ

ಹರಪನಹಳ್ಳಿ: ದಾಸ ಶ್ರೇಷ್ಟ ಕನಕದಾಸರ ಕೀರ್ತನೆ ಸರ್ವರಿಗೂ ಸ್ಫೂರ್ತಿದಾಯಕ ಎಂದು ತಹಸೀಲ್ದಾರ ಬಿ.ವಿ.ಗಿರೀಶಬಾಬು ತಿಳಿಸಿದ್ದಾರೆ.

ಅವರು ನಗರದ ತಾಲೂಕಾಡಳಿತ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನಕದಾಸರು ಶ್ರೇಷ್ಟ ಕವಿ, ಸಂತರಾಗಿದ್ದು, ಅವರ ಆದರ್ಶಗಳ ಪಾಲನೆ ಮಾಡಬೇಕಾಗಿದೆ ಎಂದ ಅವರು, ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದರು ಎಂದು ಹೇಳಿದರು.

ಉಪನ್ಯಾಸ ನೀಡಿದ ಹಾಸ್ಟೆಲ್‌ ಮೇಲ್ವಿಚಾರಕ ಎನ್.ಜಿ. ಬಸವರಾಜ ಮಾತನಾಡಿ, ಕನಕದಾಸರು ಹಂಪಿಯ ವಿಜಯನಗರ ಸಾಮ್ರಾಜ್ಯದ ಜತೆ ನಂಟನ್ನು ಹೊಂದಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ದಾಸ ಸಾಹಿತ್ಯದ ಪಿತಾಮಹ ಎಂದು ನುಡಿದರು.

ಕುರುಬ ಸಮಾಜದ ತಾಲೂಕಾಧ್ಯಕ್ಷ ಗೋಣಿಬಸಪ್ಪ ಮಾತನಾಡಿ, ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕರಲ್ಲಿ ಕನಕದಾಸರು ಒಬ್ಬರು, ಮೇಲು ಕೀಳು ಎಂಬ ಬೇಧ ಭಾವ ತಮ್ಮ ಕೀರ್ತನೆಗಳ ಮೂಲಕ ಹೋಗಲಾಡಿಸಲು ಪ್ರಯತ್ನ ಮಾಡಿದರು ಎಂದು ಹೇಳಿದರು.

ಕುರುಬ ಸಮಾಜದ ರಾಜ್ಯ ಘಟಕದ ಸದಸ್ಯ ಎಚ್.ಬಿ. ಪರಶುರಾಮಪ್ಪ ಮಾತನಾಡಿ, ಕನಕದಾಸರ ವ್ಯಕ್ತಿತ್ವ, ಅವರ ತತ್ವ, ಆದರ್ಶ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕುರುಬ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬರ ಇರುವುದರಿಂದ ಈ ಬಾರಿ ಕನಕದಾಸರ ಜಯಂತಿ ಸರಳವಾಗಿ ಆಚರಿಸಲಾಯಿತು.

ತಾಪಂ ಇಒ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮನಗೌಡ, ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಭೀಮಪ್ಪ, ಚಿರಸ್ಥಹಳ್ಳಿ ಬಸವರಾಜಪ್ಪ,ಮುತ್ತಿಗೆ ಜಂಬಣ್ಣ, ಭರತೇಶ, ಬಳಿಗಾನೂರು ಪರಶುರಾಮ, ಅಲಮರಸೀಕೆರೆ ಪರಶುರಾಮ, ಸಿದ್ದಪ್ಪ ಮಾರೇರ್‌ ಇತರರು ಇದ್ದರು.