ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಭಕ್ತಶ್ರೇಷ್ಠ ಕನಕದಾಸರ ಜಯಂತಿಯನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು.
ಕುಷ್ಟಗಿ: ಸಂತರು, ಶರಣರು ಕಟ್ಟಿಬೆಳೆಸಿದ ಈ ನಾಡಿನಲ್ಲಿ ಇಂದಿಗೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿರುವುದು ವಿಷಾದನೀಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗಿ, ಸಮಾನತೆ ಹಾಗೂ ಸಹೋದರತ್ವದ ಆಧಾರದ ಮೇಲೆ ಜಾತ್ಯತೀತ ನಾಡು ನಿರ್ಮಾಣವಾಗಬೇಕು. ಮುಂದಿನ ಪೀಳಿಗೆಗೆ ಜಾತಿಭೇದವಿಲ್ಲದ ಸಮಾಜವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಮಾಜದಲ್ಲಿ ಜಾತಿ, ಧರ್ಮ ಹಾಗೂ ವಿವಿಧ ಭೇದ-ಭಾವಗಳ ಹೆಸರಿನಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಗಮನಿಸಬೇಕಿದೆ. ಸಂವಿಧಾನ ಹಾಗೂ ಕಾನೂನುಗಳ ವ್ಯವಸ್ಥೆ ಇಲ್ಲದ ಕಾಲದಲ್ಲಿಯೇ ಕನಕದಾಸರು ಮತ್ತು ಬಸವಾದಿ ಶರಣರು ಸಮಾನತೆಯ ಸಂದೇಶ ಸಾರಿದ್ದಾರೆ. ನೀವು ಬದುಕಿ, ಇತರರಿಗೂ ತೊಂದರೆ ಕೊಡದೆ ಬದುಕಲು ಅವಕಾಶ ಮಾಡಿಕೊಡಿ ಎಂಬ ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದರು.ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಮಾತನಾಡಿ, ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾನು, ನನ್ನಿಂದಲೇ ಎಂಬ ಅಹಂಭಾವ ಬಿಟ್ಟು ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ, ಶರಣು ತಳ್ಳಿಕೇರಿ, ಪಿಎಸ್ಐ ಹನುಮಂತಪ್ಪ ತಳವಾರ್, ಕೆ. ಮಹೇಶ, ಸಂಗಪ್ಪ ಪಂಚಮ್, ಕಲ್ಲೇಶ ತಾಳದ, ಹನುಮಂತಪ್ಪ ಚೌಡ್ಕಿ, ಹಿರಿಯ ವಕೀಲ ಫಕೀರಪ್ಪ ಚಳಗೇರಿ, ನಾಗರಾಜ ಮೇಲಿನಮನಿ, ಮಹಾಲಿಂಗಪ್ಪ ದೋಟಿಹಾಳ, ಸತ್ಯಪ್ಪ ರಾಜೂರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾವಲಸಾಬ ಅತ್ತಾರ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುದುಕವ್ವ ಗಂಜ್ಯಾಳ ಅವರನ್ನು ಗೌರವಿಸಲಾಯಿತು. ಶರಣು ಹುಡೇದ ಕಾರ್ಯಕ್ರಮ ನಿರೂಪಿಸಿದರು.