ಕನಕಗಿರಿ ಪಟ್ಟಣದ ಕನಕದಾಸ ವೃತ್ತದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ೩೩೯ನೇ ಜಯಂತಿ ನಿಮಿತ್ತ ತಹಸೀಲ್ದಾರ್‌ ಚಂದ್ರಶೇಖರ ಗಾಳಿ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿದರು.

ಕನಕಗಿರಿ: ಭಕ್ತಿ ಮಾರ್ಗದಲ್ಲಿದ್ದುಕೊಂಡು ಇಡೀ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಕನಕದಾಸರು ಪ್ರಮುಖ ಪಾತ್ರವಹಿಸಿದ್ದರು ಎಂದು ತಹಸೀಲ್ದಾರ್‌ ಚಂದ್ರಶೇಖರ ಗಾಳಿ ಹೇಳಿದರು.

ಅವರು ಪಟ್ಟಣದ ಕನಕದಾಸ ವೃತ್ತದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೩೩೯ನೇ ಜಯಂತಿ ನಿಮಿತ್ತ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಶುಕ್ರವಾರ ಮಾತನಾಡಿದರು. ಸಮಾಜದಲ್ಲಿ ಬೇರೂರಿದ್ದ ಕೀಳರಿಮೆ ಹೋಗಲಾಡಿಸುವ ಕಾರ್ಯ ಕನಕದಾಸರಿಂದ ಆಗಿದೆ. ಭಕ್ತಿ ಮಾರ್ಗದ ಮೂಲಕ ಎಲ್ಲ ಜಾತಿಯವರನ್ನು ಒಗ್ಗೂಡಿಸಿ ಮನುಕುಲದ ತತ್ವವನ್ನು ಸಾರಿದ ದಾರ್ಶನಿಕ ಎಂದೆನಿಸಿದ್ದಾರೆ. ಇಂತಹ ಸಂತರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಆನಂತರ ಕುರುಬ ಸಮಾಜದ ತಾಲೂಕು ಅಧ್ಯಕ್ಷ ನಾಗಪ್ಪ ಹುಗ್ಗಿ ಮಾತನಾಡಿ, ಮೌಢ್ಯ ಮಾತ್ರವಲ್ಲದೇ ಭಕ್ತಿಯ ಬಗ್ಗೆ ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ. ಬದುಕುವುದಕ್ಕಾಗಿ ಭಕ್ತಿ ಹುಟ್ಟಬಾರದು. ಭಕ್ತಿಯಿಂದ ಆತ್ಮಶುದ್ಧಿಯಾದರೆ, ನಡೆ, ನುಡಿಯಿಂದ ಸಮಾಜ ಪರಿಶುದ್ಧಿಯಾಗಲಿದೆ ಎನ್ನುವ ಕನಕದಾಸರ ತತ್ವ ಎಂದೆಂದಿಗೂ ಅಜರಾಮರ ಎಂದು ಹೇಳಿದರು.

ಈ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯಲಕ್ಷ್ಮೀ ಹಿರೇಮಠ, ಮೈಸೂರು ಮಿನರಲ್ಸ್ ನಿರ್ದೇಶಕ ಗಂಗಾಧರಸ್ವಾಮಿ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ರಾಜಸಾಬ ನಂದಾಪುರ, ಸಿದ್ದೇಶ ಕಲುವಾಗಿಲಮಠ, ರಾಕೇಶ ಕಂಪ್ಲಿ, ಶರಣೇಗೌಡ, ಪ್ರಮುಖರಾದ ವೀರೇಶ ಸಮಗಂಡಿ, ಮಹಾಂತೇಶ ಸಜ್ಜನ್, ಶಾಂತಪ್ಪ ಬಸರಿಗಿಡ, ಸಣ್ಣೆಪ್ಪ ಸಿಂಗಾಪುರ, ಪರಸಪ್ಪ ಚೌಡ್ಕಿ, ಹೂವಪ್ಪ ಚೌಡ್ಕಿ, ಹರೀಶ ಪೂಜಾರ, ಜಡಿಯಪ್ಪ ಮುಕ್ಕುಂದಿ, ಹೊನ್ನೂರುಸಾಬ ಉಪ್ಪು, ಹಜರತಹುಸೇನ ಮುಜಾವರ, ಗಂಗಾಧರ ಚೌಡ್ಕಿ ಇದ್ದರು.

ಕೊಪ್ಪಳ ಜಿಲ್ಲಾಡಳಿತದಿಂದ ಭಕ್ತ ಕನಕದಾಸ ಜಯಂತ್ಯುತ್ಸವ ಆಚರಣೆ: ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಶುಕ್ರವಾರ ಆಚರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಮಹೆಬೂಬ ಜಿಲಾನಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಾಟೀಲ, ಶಿಕ್ಷಣ ಇಲಾಖೆಯ ಅಧಿಕಾರಿ ಶೇಖರಪ್ಪ ಹೊರಪೇಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕರ್ಣಕುಮಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪಿ.ಬಿ. ಹಿರೇಗೌಡರ ಉಪಸ್ಥಿತರಿದ್ದರು.ಸಮಾಜದ ಮುಖಂಡರಾದ ಮಂಜುನಾಥ ಸೊರಟೂರು, ಶರಣಪ್ಪ ಸಿಂಧೋಗಿ, ಹನುಮಂತಪ್ಪ ಕೌದಿ, ಗುಡದಪ್ಪ ಹಲಗೇರಿ, ಮಂಜುನಾಥ ಬಂಗಾಳಿ, ಪರಶುರಾಮ ಅಣ್ಣಿಗೇರಿ, ಬಸವರಾಜ ಭೀಮನೂರು, ಪದ್ಮಾವತಿ ಕಂಬಳಿ, ಶಿಲ್ಪಾ ಗೂಡ್ಲಾನೂರು ಭಾಗವಹಿಸಿದ್ದರು.