ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಭಾಗದ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿದೆ
ಕೊಪ್ಪಳ: ಬಿಡದಿ ಭಾಗದ ರೈತರ ಭೂಸ್ವಾಧೀನ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಂಡಾಟವಾಡುತ್ತಿದ್ದಾರೆ. ಇದರ ವಿರುದ್ಧ ಜು.೧೭ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಹಾಲಿ, ಮಾಜಿ ಶಾಸಕರು ಸೇರಿ ಪಕ್ಷದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಭಾಗದ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿದೆ. ಹಿಂದೆ ರೈತರ ವಿಚಾರದಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಹಾಕಿದ್ದರು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಹಠಮಾರಿತನದಿಂದ ರೈತರ ಬದುಕಿಗೆ ಕೊಳ್ಳಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರೈತರ ರಕ್ಷಣೆಗೆ ರಾಹುಲ್ ಗಾಂದಿ ಬರಲಿ ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ ಬಿಡದಿ ಭೂಸ್ವಾಧೀನ ವಿಚಾರವಾಗಿ ಮೂರು ಸದಸ್ಯರ ಸಮಿತಿ ರಚಿಸಿರುವುದು ಯಾವ ಪುರುಷಾರ್ಥಕ್ಕೆ ? ಒತ್ತಾಯಪೂರ್ವಕವಾಗಿ ರೈತರ ಜಮೀನು ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರೂ ರಾತ್ರೋರಾತ್ರಿ ರೈತರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಬಿಡದಿ ಭಾಗಕ್ಕೆ ಭೇಟಿ ನೀಡಿದ ವೇಳೆ ರೈತರು ತಮಗೆ, ಗೂಂಡಾಗಳು ಹೆದರಿಸುತ್ತಿದ್ದಾರೆ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ. ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ನಾಟಕವಾಡುತ್ತಾ ಮತ್ತೊಂದೆಡೆ ಒತ್ತಾಯ ಪೂರ್ವಕವಾಗಿ ಭೂಸ್ವಾಧೀನ ನಡೆಸಲಾಗುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ರೈತರ ವಿರುದ್ಧ ಸರ್ಕಾರ ನಡೆಸುತ್ತಿರುವ ಷಡ್ಯಂತ್ರ ಮತ್ತು ಕುತಂತ್ರವನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ಬಿಡದಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ರೈತರ ಕೋಪಕ್ಕೆ ಬಲಿಷ್ಠ ಸರ್ಕಾರ ಬಲಿಯಾಗಲಿದೆ. ಬಿಡದಿ ಭೂಸ್ವಾಧೀನ ವಿರೋಧಿಸಿ ಜು.೧೭ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಹಾಲಿ ಹಾಗೂ ಮಾಜಿ ಶಾಸಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಸಿಎಂ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ತಿಳಿಯಲ್ಲ ಎಂದುಕೊಂಡಿದ್ದಾರೆ. ಸಿಎಂಗೆ ಯಾವ ರೀತಿ ಒತ್ತಡವಿದೆಯೋ ನಮಗೆ ತಿಳಿಯುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಭಂಡತನ ಪ್ರದರ್ಶನ ಬಿಟ್ಟು, ರೈತರ ಸಮಸ್ಯೆ ಆಲಿಸಬೇಕು. ರೈತರ ಸಮಸ್ಯೆ ಗೊತ್ತಿದೆ. ಸಮಸ್ಯೆ ಸೃಷ್ಟಿಕರ್ತರೇ ಈ ಸರ್ಕಾರ, ಈ ಪ್ರಾಜೆಕ್ಟ್ ನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಸಿಎಂ ಜೈಲಿಗೆ ಸೇರಿಸಲು ಹುನ್ನಾರದ ವಿಚಾರ, ಸಿಎಂ ಬಾಯಲ್ಲಿ ಈ ಮಾತು ಬರಬಾರದು. ಸಿಎಂ ಒತ್ತಾಯ ಪೂರ್ವಕವಾಗಿ ಜಮೀನು ಕಸಿಯಲ್ಲ ಎನ್ನುತ್ತಿದ್ದಾರೆ. ಆದರೆ ಮತ್ತೊಂದು ಕಡೆ ರಾತ್ರೋ ರಾತ್ರಿ ಗೂಂಡಾಗಳು ರೈತರ ಮನೆಗೆ ಹೋಗಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ನಾಟಕ ಬಿಟ್ಟು ರೈತರ ವಿಚಾರದಲ್ಲಿ ಏಕಿಷ್ಟು ಆಲಸ್ಯ ಎನ್ನುವುದು ಗೊತ್ತಾಗುತ್ತಿಲ್ಲ. ರೈತರ ಕೆಣಕುವುದನ್ನು ಬಿಡಬೇಕು. ರೈತ ಮಹಿಳೆಯರು ಪೊರಕೆ, ಬಡಿಗೆ ಹಿಡಿಯುವ ಸ್ಥಿತಿಗೆ ತಂದಿದ್ದು, ಈ ಸರ್ಕಾರ ಎಂದರು.ಸಿಎಂ ಜೈಲಿಗೆ ಸೇರುವ ಅನುಕಂಪ ಗಿಟ್ಟಿಸಿಕೊಳ್ಳುವ ಹೇಳಿಕೆ ಕೊಡುವ ಇಷ್ಟವಿಲ್ಲ. ಸಿಎಂ ಇಂತಹ ಹೇಳಿಕೆ ಹೇಳುವುದನ್ನು ಬಿಡಬೇಕು ಎಂದರು.
ಶಾಸಕ ಶಿವರಾಜ ತಂಗಡಗಿ ಹೇಳಿಕೆ ಗಮನಿಸಿದ್ದೇನೆ. ತುಂಗಭದ್ರಾ ಡ್ಯಾಂಗೆ ೭೫ ಟಿಎಂಸಿ ನೀರು ಬಂದಾಗ ಮಾತ್ರ ಬೆಳೆಗೆ ನೀರು ಬಿಡಲಾಗುತ್ತೆ ಎಂಬ ಅಹಂಕಾರದ ಮಾತನ್ನಾಡಿದ್ದಾರೆ. ಆದರೆ ಹಿಂದೆ ಬಿಎಸ್‌ವೈ ಸರ್ಕಾರ ಇದ್ದಾಗ ೨೭ ಟಿಎಂಸಿ ಡ್ಯಾಂನಲ್ಲಿ ಇತ್ತು. ಆಗ ರೈತರ ಬೆಳೆಗೆ ಅನ್ಯಾಯ ಆಗಬಾರದು, ರೈತರಿಗೆ ನಷ್ಟವಾಗಬಾರದು ಎಂದು ಆಗಲೂ ಕಾಲುವೆಗೆ ನೀರು ಹರಿಸಿದ ಉದಾಹರಣೆ ನಮ್ಮ ಮುಂದೆ ಇದೆ. ನೀರು ಬಿಡುವ ವಿಚಾರದಲ್ಲಿ ಬಂಡಾಟವಾಡುವುದನ್ನು ಬಿಟ್ಟು ರೈತರ ಹಿತ ಕಾಪಾಡಲಿ ಎಂದು ಒತ್ತಾಯ ಮಾಡಿದರು.ಈ ವೇಳೆ ಬಿಜೆಪಿಯ ಪ್ರಮುಖರಿದ್ದರು.