ಅಂಜಲಿ ಹತ್ಯೆ ಖಂಡಿಸಿ ಬೀದಿಗಿಳಿದ ಬಿಜೆಪಿ

| Published : May 19 2024, 01:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಕಡೆಗೆ ಜನರ ಗಮನ ಸೆಳೆದು, ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಕೊಲೆಗಳಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಹಾ ಹಿರೇಮಠ ಕೊಲೆ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಆ ಪ್ರಕರಣದಲ್ಲಿ ಸರಿಯಾದ ಕ್ರಮ ಕೈಗೊಳ್ಳದ್ದರಿಂದ, ಮತ್ತೆ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಕೇವಲ ಅಧಿಕಾರದ ದಾಹದಲ್ಲಿದ್ದಾರೆ. ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿ ಹೆಸರಿಗಷ್ಟೇ ಆಗಿದ್ದು, ಡಿ.ಕೆ.ಶಿವಕುಮಾರ್ ಆಕ್ಷನ್ ಮೋಡ್‌ಲ್ಲಿದ್ದಾರೆ ಎಂದು ಟೀಕಿಸಿದರು.

ನಾಯಕಿ ಉಜ್ವಲ ಬಡವಣಾಚೆ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ದಿನಕ್ಕೊಂದು ಕೊಲೆ ನಡೆಯುತ್ತಿದ್ದರೂ ಸರ್ಕಾರ ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಿಲ್ಲ. ರಾಜ್ಯದ ಮಹಿಳೆಯರಿಗೆ ಸುರಕ್ಷೆ ನೀಡದ ರಾಜ್ಯ ಸರ್ಕಾರ ತೊಲಗಲಿ ಎಂದ ಅವರು, ಯುವತಿಯರು ಕೂಡ ಹುಚ್ಚು ಪ್ರೀತಿಗೆ ಬಲಿಯಾಗಬಾರದೆಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಾಜಿ ಉಪಮೇಯರ್‌ ರೇಷ್ಮಾ ಪಾಟೀಲ, ಮುರುಘೇಂದ್ರ ಗೌಡ ಪಾಟೀಲ, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ನಯನಾ ಭಸ್ಮೆ , ಶಿಲ್ಪಾ ಕೇಕರೆ, ಭಾಗ್ಯಶ್ರೀ ಕೋಕಿತ್ಕರ, ರಾಜೇಶ್ವರಿ ಒಡೆಯರ, ಸುಜಾತಾ ಮಠದ, ನಾಗವೇಣಿ ಕುಲಕರ್ಣಿ, ಮಾದೇವಿ ಮಠದ, ಸುವರ್ಣಾ ಕಾಂತಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.