ಮಾಗಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಅಧಿಕಾರಕ್ಕೆ ಬಂದ ಡಿ.ಕೆ.ಶಿವಕುಮಾರ್ 100 ದಿನದ ಸರ್ಕಾರದ ಸಾಧನೆ ಶೂನ್ಯ, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಕೇವಲ ಘೋಷಣೆಯಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು
ಮಾಗಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಅಧಿಕಾರಕ್ಕೆ ಬಂದ ಡಿ.ಕೆ.ಶಿವಕುಮಾರ್ 100 ದಿನದ ಸರ್ಕಾರದ ಸಾಧನೆ ಶೂನ್ಯ, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಕೇವಲ ಘೋಷಣೆಯಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.
ಪಟ್ಟಣದ ಬಿ.ಕೆ.ರಸ್ತೆಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಅವರ ಪಕ್ಷದ ಮಾಜಿ ಸಚಿವ ರಾಜಣ್ಣನವರು ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ಮತ ಹಾಕುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಸಿದ್ದರಾಮಯ್ಯನವರು ಅಹಿಂದ ಹೋರಾಟ ಆರಂಭಿಸಿದ್ದು, ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಸಿದ್ದರಾಮಯ್ಯನವರೇ ತೆಗೆಯುವುದರಲ್ಲಿ ಅನುಮಾನವಿಲ್ಲ. ಕೇವಲ ಭರವಸೆಗಳಿಂದಲೇ ಕಾಲ ದೂಡುತ್ತಿದ್ದಾರೆ. ಈಗ ಮಂಗಳೂರಿಗೆ ಹೋಗಿ ಮೀನು ತಿಂದು ಯಾವ ಹೊಸ ಯೋಜನೆ ಘೋಷಿಸುತ್ತಾರೋ? ಅದಕ್ಕೆ ಎಲ್ಲಿಂದ ಹಣ ತರುತ್ತಾರೋ? ಸರ್ಕಾರದಲ್ಲಿ ಹಣ ಇದೆಯಾ ಎಂದು ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ. ಆದರೂ ಪದೇಪದೇ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಹಿಂದೆ ಮಾಡಿರುವ ಎಷ್ಟು ಯೋಜನೆ ಅನುಷ್ಠಾನಗೊಂಡಿವೆ ಎಂಬುದನ್ನು ಸರ್ಕಾರ ಮೊದಲು ರಾಜ್ಯದ ಜನತೆಗೆ ತಿಳಿಸಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತ, ರಾಜ್ಯದ ಆರ್ಥಿಕ ಪರಿಸ್ಥಿತಿ, ಬರ ನಿರ್ವಹಣೆ, ಸಾರಿಗೆ ಇಲಾಖೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮ ಹಾಗೂ ಗಣೇಶೋತ್ಸವದ ವಿಚಾರಗಳನ್ನು ಪ್ರಸ್ತಾಪಿಸಿದರು.
ಸರ್ಕಾರದ ಮೇಲೆ ಸಾಲದ ಹೊರೆ:ಕಾಂಗ್ರೆಸ್ ಸರ್ಕಾರ ರಾಜ್ಯದ ಮೇಲೆ ಸಾಲದ ಹೊರೆ ಹಾಕುತ್ತಿದೆ. ಸರ್ಕಾರದ ಸಾಲ ಹಾಗೂ ಅದರ ಮೇಲಿನ ಬಡ್ಡಿ ವೆಚ್ಚದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಎದುರಾಗುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದ ಬಜೆಟ್‌ನಲ್ಲಿ ₹ 24, 600 ಕೋಟಿ ರು. ಹೆಚ್ಚುವರಿ ಮೊತ್ತ ಉಳಿದಿತ್ತು. ಪ್ರಸ್ತುತ ಸರ್ಕಾರ ದೊಡ್ಡ ಪ್ರಮಾಣದ ಸಾಲ ಮಾಡಿ, ಆದಾಯ ವೆಚ್ಚದ ನಿರ್ವಹಣೆಯಲ್ಲಿ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದರು.
ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲೂ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ಹಿಂದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳ ಪೈಕಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಎಂಬುದನ್ನು ಸರ್ಕಾರ ಮೊದಲು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.ಈಗ ಯಾರಿಗೂ ಬೇಡವಾದ ಖಾತೆಗೆ ಸಚಿವರಾಗಿರುವ ಎಚ್.ಸಿ.ಬಾಲಕೃಷ್ಣ ಅವರು ಹಿಂದೆ ಬಿಜೆಪಿಯಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಗೆ ಹೋದವರು. ನಮ್ಮಲ್ಲೆ ಇದ್ದಿದ್ದರೆ ಈ ಮೊದಲೆ ಮಂತ್ರಿಯಾಗುತ್ತಿದ್ದರು ಎಂದು ಟೀಕಿಸಿದ ಅಶೋಕ್, ರಾಜ್ಯದಲ್ಲಿ ಬರ ಪರಿಸ್ಥಿತಿ ಆರಂಭವಾದ ತಕ್ಷಣವೇ ರೈತರಿಗೆ ನೆರವು ನೀಡಬೇಕಿತ್ತು. ಆದರೆ ಸರ್ಕಾರ ಇದೀಗ ಬರದ ಕುರಿತು ಘೋಷಣೆಗಳನ್ನು ಮಾಡುತ್ತಿದೆ. ನಂತರ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವ ವೇಳೆಗೆ ಮತ್ತೊಂದು ಮಳೆಗಾಲ ಬಂದಿರುತ್ತದೆ ಎಂದು ಟೀಕಿಸಿದ ಅಶೋಕ್, ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರೆತರೆ ಮಾತ್ರ ಅದರ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಮಹಿಳೆಯರಿಗೆ ತಾಲೂಕು ಅಧ್ಯಕ್ಷ ಪ್ರಸಾದ್‌ಗೌಡ ಸೀರೆ ವಿತರಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಮಾತನಾಡಿದರು, ಜಿಲ್ಲಾಧ್ಯಕ್ಷ ಆನಂದ್‌ಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಗೌತಮ್‌ಗೌಡ, ವೀರಭದ್ರಯ್ಯ, ಬಿಜೆಪಿ ಮುಖಂಡರಾದ ಶಶಿ, ರಾಘವೇಂದ್ರ, ಧನುಷ್, ಕೆಂಚನಹಳ್ಳಿ ಕಿರಣ್‌ಕುಮಾರ್, ಹುಲುವಾಡಿ ದೇವರಾಜ್, ರಾಜೇಶ್, ಕಣ್ಣೂರು ನಾಗರಾಜ್, ಶಂಕರ್, ಹೇಮಂತ್‌ಗೌಡ, ಬೋಪಣ್ಣ, ಜಯರಾಮಯ್ಯ, ಭಾಗ್ಯಮ್ಮನಾರಾಯಣಪ್ಪ, ಚನ್ನಬಸವಯ್ಯ, ಪ್ರಸನ್ನ, ಹರೀಶ್, ಶಿವಣ್ಣ, ರೇವಣ್ಣ, ನಾಗಮ್ಮ, ಲಕ್ಷ್ಮಣ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ಪಟ್ಟಣದಲ್ಲಿ ಬಿಜೆಪಿ ಕಾಯಾಲಯವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿ ಮುಖಂಡರು ಉದ್ಘಾಟಿಸಿದರು.