ಬಿಜೆಪಿ ಮಾತೃಶಕ್ತಿಯೊಂದಿಗೆ ಇರುತ್ತದೆ: ಸಿ.ಟಿ. ರವಿ

| Published : May 02 2024, 12:16 AM IST

ಸಾರಾಂಶ

ಬಿಜೆಪಿ ಯಾವಾಗಲೂ ನ್ಯಾಯದ ಪರವಾಗಿಯೇ ಇರುತ್ತದೆ. ಪ್ರಜ್ವಲ್ ಪ್ರಕರಣದಲ್ಲಿಯೂ ಬಿಜೆಪಿ ಮಾತೃಶಕ್ತಿಯೊಂದಿಗೆ ಇರುತ್ತದೆ.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು

ನೇಹಾ ಪ್ರಕರಣವೇ ಬೇರೆ, ಪ್ರಜ್ವಲ್ ಪ್ರಕರಣವೇ ಬೇರೆ

ಮೋದಿ ಎಂದರೆ ಕಾಂಗ್ರೆಸ್‌ನವರಿಗೆ ಭೇದಿ ಶುರುವಾಗುತ್ತದೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬಿಜೆಪಿ ಯಾವಾಗಲೂ ನ್ಯಾಯದ ಪರವಾಗಿಯೇ ಇರುತ್ತದೆ. ಪ್ರಜ್ವಲ್ ಪ್ರಕರಣದಲ್ಲಿಯೂ ಬಿಜೆಪಿ ಮಾತೃಶಕ್ತಿಯೊಂದಿಗೆ ಇರುತ್ತದೆ ಮತ್ತು ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದುವರೆಗೂ ನಾನು ವೀಡಿಯೋ ನೋಡಿಲ್ಲ. ಪತ್ರಿಕೆಯಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ. ಈಗಾಗಲೇ ನಮ್ಮ ವರಿಷ್ಠರು ಸಹ ಹೇಳಿದ್ದಾರೆ. ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಅನುಭವಿಸಲೇಬೇಕು ಎಂದು. ಇದರಲ್ಲಿ ಮಾತೃಶಕ್ತಿಯೊಂದಿಗೆ ಇರುತ್ತೇವೆ ಎಂದಿದ್ದಾರೆ. ಹೀಗಾಗಿ, ಬಿಜೆಪಿ ತಪ್ಪು ಮಾಡಿದವರ ವಿರುದ್ಧವೇ ಇರುತ್ತದೆ. ಈಗಗಾಲೇ ಪ್ರಕರಣವನ್ನು ಎಸ್‌ಐಟಿಗೆ ರಾಜ್ಯ ಸರ್ಕಾರ ವಹಿಸಿದೆ. ತನಿಖೆ ನಡೆದು, ಬೇಗನೆ ಸತ್ಯ ಬೆಳಕಿಗೆ ಬರಲಿ ಎಂದರು.

ನೇಹಾ ಪ್ರಕರಣಕ್ಕೂ ಮತ್ತು ಪ್ರಜ್ವಲ್ ಪ್ರಕರಣಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ. ಅದು ಎಲ್ಲರೆದುರಿಗೆ ಹಾಡುಹಗಲೇ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮಾತುಗಳಿಂದಾಗಿ ನೇಹಾ ಪರವಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದೆ. ಆದರೆ, ಇಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು. ಕುಮಾರಸ್ವಾಮಿ ಅವರು ಈಗಾಗಲೇ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ ಎಂದರು.

ಶುದ್ಧ ಸುಳ್ಳು:

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದು ಶುದ್ಧ ಸುಳ್ಳು. ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿ ಇದ್ದಾಗ ಕೊಟ್ಟಿದ್ದಕ್ಕಿಂತಲೂ ದುಪ್ಪಟ್ಟು ಅನುದಾನ ಈಗ ಮೋದಿ ಅವಧಿಯಲ್ಲಿ ಬಂದಿದೆ ಎಂದರು.

2004ರಿಂದ 2014ವರೆಗೂ ಕಾಂಗ್ರೆಸ್ ಆಡಳಿತದಲ್ಲಿ ತೆರಿಗೆ ಪಾಲು ಕೇವಲ ₹1.43 ಲಕ್ಷ ಕೋಟಿ ರುಪಾಯಿ ಬಂದಿತ್ತು. ಆದರೆ, ಮೋದಿ ಅವರ ಆಡಳಿತದಲ್ಲಿ ಬರೋಬ್ಬರಿ ₹5.96 ಲಕ್ಷ ಕೋಟಿ ರುಪಾಯಿ ಬಂದಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಇನ್ನು ಒಂದು ವರ್ಷದಲ್ಲಿ ಸಂಬಳ ಕೊಡುವುದಕ್ಕೂ ದುಡ್ಡಿರುವುದಿಲ್ಲ. ಆಗ ತಮ್ಮ ಆಸ್ತಿಯನ್ನಾದರೂ ಮಾರಿ ಕಾಂಗ್ರೆಸ್ಸಿನವರು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಬೇಕು. ಆದರೆ, ರಾಜ್ಯವನ್ನು ಮಾರಾಟ ಮಾಡಬಾರದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಎಸ್.ಕೆ. ಬೆಳ್ಳುಬ್ಬಿ ಹಾಗೂ ಚಂದ್ರಶೇಖರ ಹಲಿಗೇರಿ ಇದ್ದರು.

ಕರಡಿ ಆತ್ಮಾವಲೋಕನ ಮಾಡಿಕೊಳ್ಳಲಿ:

ಮಾಜಿ ಸಂಸದ ಸಂಗಣ್ಣ ಕರಡಿ ಆತ್ಮಾವಲೋಕನ ಮಾಡಿಕೊಳ್ಳಲಿ, ನಾನೇನು ಅಂತ ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

ಕರಡಿ ಅವರ ಕುರಿತು ನಾನು ಹೇಳಿದ್ದರಲ್ಲಿ ತಪ್ಪಿಲ್ಲ. ಎರಡು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದವರು ಈಗ ಏಕಾಏಕಿ ಉಲ್ಟಾ ಆಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತನಗೂ ಟಿಕೆಟ್ ಬೇಕು, ಮಗನಿಗೂ ಟಿಕೆಟ್ ಬೇಕು. ಸೊಸೆಗೂ ಟಿಕೆಟ್ ಬೇಕು ಎನ್ನುವ ಮನಸ್ಥಿತಿಯ ಸಂಗಣ್ಣ ಕರಡಿಯನ್ನು ಬಿಜೆಪಿ ಎಂದೋ ದೂರವಿಡಬೇಕಾಗಿತ್ತು ಎಂದರು.ಸಂಗಣ್ಣ ಪಕ್ಷ ದ್ರೋಹಿ; ಬೆಳ್ಳುಬ್ಬಿ:ಮಾಜಿ ಸಂಸದ ಸಂಗಣ್ಣ ಕರಡಿ ಪಕ್ಷ ದ್ರೋಹಿ. ಅವರಿಗೆ ಪಕ್ಷ ಎಲ್ಲ ಕೊಟ್ಟರೂ ಇಂಥ ಕೆಟ್ಟ ನಿರ್ಧಾರ ಮಾಡಿದ್ದನ್ನು ಮತದಾರರು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದ್ದಾರೆ.

ನಾನು ಬಿಜೆಪಿ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಅವರು ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಎಂದರು. ಅದಾದ ಮೇಲೆ ಲೋಕಸಭಾ ಚುನಾವಣೆ ಬಂದಾಗ ಟಿಕೆಟ್ ಬೇಕು ಎಂದು ಹಠ ಮಾಡಿ ಪಡೆದರು. ಪಕ್ಷ ಎರಡು ಬಾರಿ ಟಿಕೆಟ್ ನೀಡಿ, ಎಂಪಿ ಮಾಡಿದೆ. ಅದಾದ ಮೇಲೆ ಮಗ, ಸೊಸೆಗೆ ಟಿಕೆಟ್ ಬೇಕು ಎಂದಾಗಲೂ ನೀಡಿದೆ. ಆದರೆ, ಈಗ ಪಕ್ಷ ತೊರೆದಿದ್ದಾರೆ. ನನಗೂ ಟಿಕೆಟ್ ತಪ್ಪಿದೆ. ಟಿಕೆಟ್ ತಪ್ಪಿದೆ ಎಂದಾಕ್ಷಣ ನಾವೇನು ಬಿಜೆಪಿ ತೊರೆದಿಲ್ಲ ಎಂದರು.

ಬಿಜೆಪಿಯ ಸಿ.ಟಿ. ರವಿ ಕುರಿತು ಸಂಗಣ್ಣ ಕರಡಿ ಹಗುರವಾಗಿ ಮಾತನಾಡಬಾರದು. ಅವರು ಸನ್ಯಾಸಿಗಳಿದ್ದಂತೆ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಅವರನ್ನ ಹತ್ತಿರದಿಂದ ನೋಡಿದ್ದಾರೆ. ಹಾಗಿದ್ದಾಗ್ಯೂ ಕೆಟ್ಟ ಪದ ಬಳಕೆ ಮಾಡಿ ಟೀಕೆ ಮಾಡಿದ್ದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದರು.