ಕನ್ನಡಪ್ರಭ ವಾರ್ತೆ ವಿಜಯಪುರ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲೆಯ ಎಲ್ಲ ಮಂಡಳಗಳ ಸಂಘಟನಾತ್ಮಕ ಸಭೆ ಹಾಗೂ ಮುಂಬರುವ ಚುನಾವಣೆ ಮತ್ತು ಪಕ್ಷ ಬಲವರ್ಧನೆ ಕುರಿತಾದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಬಾರಿ ಕಾಂಗ್ರೆಸ್ ಜನರಿಗೆ ನೂರೆಂಟು ಸುಳ್ಳು ಹೇಳಿ, ಸುಳ್ಳು ಆಶ್ವಾಸನೆಗಳನ್ನು ಬಿತ್ತಿ ಹೇಗೋ ಅಧಿಕಾರ ಗದ್ದುಗೆ ಏರಿದೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ನೈಜ ಬಣ್ಣ ಜನತೆಯ ಮುಂದೆ ಬಯಲಾಗಿದೆ. ಹಗರಣಗಳಲ್ಲಿಯೇ ಮುಳುಗಿರುವ ಕಾಂಗ್ರೆಸ್‌ನಿಂದ ಯಾವ ಪ್ರಯೋಜನವೂ ಇಲ್ಲ ಎಂಬುವುದು ಜನರಿಗೂ ಅರ್ಥವಾಗಿದೆ. ಹೀಗಾಗಿ ಮುಂಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಕಲ್ಪ ಮಾಡಬೇಕಿದೆ ಎಂದರು.ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಸ್ಪಷ್ಟತೆ, ಬದ್ಧತೆಯ ಬಲದೊಂದಿಗೆ ಆತ್ಮ ವಿಶ್ವಾಸದೊಂದಿಗೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಬಲ, ಕಾರ್ಯಕರ್ತರೇ ಶಕ್ತಿ, ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು. ಲೂಟಿ ಸರ್ಕಾರವಾಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು ಮುಂದಾಗಬೇಕು ಎಂದರು.ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಗೋಪಾಲ ಘಟಕಾಂಬಳೆ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಭೀಮಾಶಂಕರ ಬಿರಾದಾರ, ಬಸವರಾಜ ಬೈಚಬಾಳ, ಶಿಲ್ಪಾ ಕುದರಗೊಂಡ, ಪ್ರಭುಗೌಡ ಬಿರಾದಾರ, ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.ಚುನಾವಣೆ ಸಮೀಪ ಬಂದಾಗ ಕೆಲವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಟಿಕೆಟ್ ನನ್ನ ಕೈಯಲ್ಲಿಯೇ ಇವೆ ಎಂದು ಹೇಳುತ್ತಾರೆ. ಬಿಜೆಪಿ ಟಿಕೆಟ್ ಯಾರ ಬಳಿಯೂ ಇಲ್ಲ, ಟಿಕೆಟ್ ಹಂಚಿಕಿಗೆ ತನ್ನದೇ ಆದ ಮಾನದಂಡಗಳನ್ನು ಬಿಜೆಪಿ ಅನುಸರಿಸುತ್ತದೆ. ಹತ್ತಾರು ಮಟ್ಟದಲ್ಲಿ ಚರ್ಚೆ, ವರಿಷ್ಠರ ಸಲಹೆ ಮೊದಲಾದ ಪ್ರಕ್ರಿಯೆಗಳನ್ನು ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಈ ಬಗ್ಗೆ ಯಾವ ಗೊಂದಲವನ್ನೂ ಬೆಳೆಸಿಕೊಳ್ಳಬೇಡಿ.

-ಅರುಣ ಶಹಾಪುರ, ವಿಧಾನ ಪರಿಷತ್ ಮಾಜಿ ಸದಸ್ಯರು.