ಚಿತ್ರದುರ್ಗದಲ್ಲಿ ಮತ್ತೆ ಕಮಲ ಕಮಾಲ್‌; ಕಾರಜೋಳ ಗೆಲುವಿನ ನಗೆ

| Published : Jun 05 2024, 12:30 AM IST

ಚಿತ್ರದುರ್ಗದಲ್ಲಿ ಮತ್ತೆ ಕಮಲ ಕಮಾಲ್‌; ಕಾರಜೋಳ ಗೆಲುವಿನ ನಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೆ ಕಮಲ ಪಾಳೆಯ ವಿಜಯೋತ್ಸವ ಆಚರಿಸಿದ್ದು, ಬಿಜೆಪಿಯ ಗೋವಿಂದ ಮಕ್ತಪ್ಪ ಕಾರಜೋಳ ಅವರು 6,84,890 ಮತಗಳನ್ನು ಪಡೆಯುವುದರೊಂದಿಗೆ ಜಯಭೇರಿ ಬಾರಿಸಿ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಅವರನ್ನು 48,121 ಮತಗಳ ಅಂತರದಿಂದ ಮಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಗೆಲವು ಸಾಧಿಸುವುದರ ಮೂಲಕ ಕ್ಷೇತ್ರ ಉಳಿಸಿಕೊಂಡಿದೆ. ಗೋವಿಂದ ಮಕ್ತಪ್ಪ ಕಾರಜೋಳ ಅವರು 6,84,890 ಮತಗಳನ್ನು ಪಡೆಯುವುದರೊಂದಿಗೆ ಜಯಭೇರಿ ಬಾರಿಸಿದ್ದಾರೆ. ಕಾರಜೋಳ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ ಅವರನ್ನು 48,121 ಮತಗಳ ಅಂತರದಿಂದ ಸೋಲಿಸಿದ್ದಾರೆ. 23 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದುದರಿಂದ ಸಹಜವಾಗಿಯೇ ಮತಗಳ ಎಣಿಕೆ ಹೆಚ್ಚು ಸಮಯ ಪಡೆಯಿತು.

ಬೆಳಿಗ್ಗೆ 8 ಗಂಟೆಗೆ ಮತಗಳ ಎಣಿಕೆ ಆರಂಭವಾದಾಗ ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ 75 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಮೊದಲ ಸುತ್ತಿನಲ್ಲಿ ಬಿ.ಎನ್.ಚಂದಪ್ಪ 32239 ಮತ ಪಡೆದರೆ, ಗೋವಿಂದ ಕಾರಜೋಳ ಅವರಿಗೆ 32164 ಮತಗಳು ಬಂದಿದ್ದವು. ಆದರೆ ನಂತರ ಫಲಿತಾಂಶದ ದಿಕ್ಕು ಬದಲಾಯಿತು. ಎರಡನೇ ಸುತ್ತಿನಲ್ಲಿ ಗೋವಿಂದ ಕಾರಜೋಳ 35821 ಮತ ಹಾಗೂ ಬಿ.ಎನ್.ಚಂದ್ರಪ್ಪ 32405 ಮತ ಪಡೆದರು. 2500 ಮತಗಳಿಗೂ ಹೆಚ್ಚು ಅಂತರದ ಮುನ್ನಡೆ ಕಾಯ್ದು ಕೊಂಡ ಗೋವಿಂದ ಕಾರಜೋಳ ಫಲಿತಾಂಶ ಪ್ರಕಟವಾಗುವ ತನಕ ಲೀಡ್ ಬಿಟ್ಟುಕೊಡಲಿಲ್ಲ. ಅಂತಿಮವಾಗಿ 48, 121ಮತಗಳ ಅಂತರದಿಂದ ಗೆಲವು ಸಾಧಿಸಿದರು.

ಹತ್ತನೇ ಸುತ್ತಿನ ಮತಗಳ ಎಣಿಕೆ ಮಾಡುವಾಗ ಗೆಲವಿನ ಅಂತರ ಇದಕ್ಕಿದ್ದಂತೆ ಐದು ಸಾವಿರದಷ್ಟು ಕುಸಿದಾಗ ಇನ್ನೂ ಐದು ಲಕ್ಷದಷ್ಟು ಮತಗಳ ಎಣಿಕೆ ಬಾಕಿ ಇತ್ತು. ಈ ವೇಳೆ 32 ಸಾವಿರ ಮತಗಳ ಅಂತರವನ್ನು ಕಾರಜೋಳ ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಮೇಲುಗೈ ಸಾಧಿಸಬಹುದೇ ಎಂಬ ಸಹಜ ಕುತೂಹಲ ಮೂಡಿದವವಾದರೂ ಫಲಿಸಲಿಲ್ಲ. 13 ನೇ ಸುತ್ತಿನಿಂದ ನಿರಂತರ ಲೀಡನ್ನು ಗೋವಿಂದ ಕಾರಜೋಳ ಕಾಯ್ದುಕೊಂಡರು.ಹೊರನಡೆದ ಚಂದ್ರಪ್ಪ:

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬೆಳಿಗ್ಗೆಯೇ ಆಗಮಿಸಿ ಎಣಿಕೆ ಕೇಂದ್ರದಲ್ಲಿದ್ದರು. ಮೂರ್ನಾಲ್ಕು ಸುತ್ತುಗಳ ಮತಗಳ ಎಣಿಕೆ ಮುಗಿದ ನಂತರ ಅಲ್ಲಿಂದ ಎದ್ದು ಹೊರ ನಡೆ ದರು, ಮತ್ತೆ ವಾಪಾಸ್ಸಾಗಲಿಲ್ಲ. ಆದರೆ ಫಲಿತಾಂಶ ಪ್ರಕಟವಾಗುವ ಮುನ್ನ ಗೋವಿಂದ ಕಾರಜೋಳ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರೊಟ್ಟಿಗೆ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಫಲಿತಾಂಶದ ಬಗ್ಗೆ ಬಿಜೆಪಿಗಿಂತ ಮಿಗಿಲಾಗಿ ಕಾಂಗ್ರಸ್ಸಿಗರು ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದರು. ಭರ್ಜರಿ ವಿಜಯೋತ್ಸವ ಆಚರಣೆಗೂ ಸಿದ್ಧರಾಗಿದ್ದರು. ವ್ಯತಿರಿಕ್ತ ಫಲಿತಾಂಶ ಅವರನ್ನು ಧೃತಿಗೆಡಿಸಿತ್ತು.

ಚಿತ್ರದುರ್ಗ ಕ್ಷೇತ್ರ ಮರಳಿ ತಮ್ಮ ತೆಕ್ಕೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಾವಿರದಷ್ಟು ಬಿಜೆಪಿ ಕಾರ್ಯಕರ್ತರು ಆಗಮಿಸಿ ವಿಜಯೋತ್ಸವದ ನಗೆ ಬೀರಿದರು. ಪಟಾಕಿ ಸಿಟಿಸಿ ಸಂಭ್ರಮ ಆಚರಿಸಿದರು. ಜಿಲ್ಲಾಧಿಕಾರಿಗಳಿಗೆ ಪ್ರಮಾಣ ಪತ್ರ ಪಡೆದ ನಂತರ ನೇರವಾಗಿ ಮಾದಾರ ಗುರುಪೀಠಕ್ಕೆ ತೆರಳಿದ ಗೋವಿಂದ ಕಾರಜೋಳ ಚೆನ್ನಯ್ಯ ಸ್ವಾಮೀಜಿ ಸಂಗಡ ಸಂತಸ ವಿನಿಮಯ ಮಾಡಿಕೊಂಡರು.ಯಾರ್ಯಾರ ಕಿಸೆಗೆ ಎಷ್ಟೆಷ್ಟು?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್. ಚಂದ್ರಪ್ಪ 6,36,769 ಮತಗಳನ್ನು ಗಳಿಸಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ 7705, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು 4950, ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ. 2206, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ 720, ಕರುನಾಡ ಸೇವಕರ ಪಾರ್ಟಿಯ ಶಬರೀಶ್ 1018, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ 1014, ಪಕ್ಷೇತರ ಅಭ್ಯರ್ಥಿ ಗಳಾದ ಅಮೃತ್ ರಾಜ 834, ಗಣೇಶ 1093, ತುಳಸಿ ಹೆಚ್ 1082, ಡಾ.ಎಂ.ಪಿ.ದಾರಕೇಶ್ವರಯ್ಯ 1397, ನಾಗರಾಜಪ್ಪ 1679, ಭೂತರಾಜ್ ವಿ.ಎಸ್ 2397, ಮಂಜುನಾಥ ಸ್ವಾಮಿ ಟಿ 2676, ರಘುಕುಮಾರ್ ಎಸ್ 2337, ಬಿ.ವೆಂಕಟೇಶ ಶಿಲ್ಪಿ 4201, ಶ್ರೀನಿವಾಸಪುರದ ಶ್ರೀನಿವಾಸಬಾಬು ಪಾವಗಡ 4548, ಸುಧಾಕರ್ ಆರ್ 1211 ಮತ ಗಳಿಸಿ ದ್ದಾರೆ. ನೋಟಾಗೆ 3190 ಮತಗಳು ದಾಖಲಾಗಿವೆ. ಅಂಚೆ ಮತಗಳ ಪೈಕಿ 132 ತಿರಸ್ಕøತಗೊಂಡಿದ್ದು, 204 ಮತಗಳು ಅಮಾನ್ಯಗೊಂಡಿವೆ.ಚಿತ್ರದುರ್ಗ ಕ್ಷೇತ್ರದ ಫಲಿತಾಂಶ ಘೋಷಣೆ ದೇಶದಲ್ಲೇ ಮೊದಲು

ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಫಲವಾಗಿ ದೇಶದಲ್ಲಿಯೇ ಪ್ರಥಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿಯನ್ನು ಅಧೀಕೃತವಾಗಿ ಘೋಷಣೆ ಮಾಡಲಾಗಿದೆ.

ಮತ ಎಣಿಕೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿನಂದನೆ ಸಲ್ಲಿಸಿದ್ದಾರೆ.