ಮಡಿಕೇರಿ: ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.ನಗರದ ಇಂದಿರಾ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಬಿಜೆಪಿ, ನರೇಂದ್ರ ಮೋದಿಗೆ ಜೈಕಾರ ಹಾಕಿ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಮನು ಮುತ್ತಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಗೋಣಿಕೊಪ್ಪ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ, ಇದೊಂದು ಐತಿಹಾಸಿಕ ದಾಖಲೆಯಾಗಿದೆ. 15 ವರ್ಷಗಳ ಮಮತಾ ಬ್ಯಾನರ್ಜಿ ಸಾಮ್ರಾಜ್ಯ ಪತನವಾಗಿ ಆ ನೆಲದಲ್ಲಿ ಹಿಂದುತ್ವ ಧ್ವಜ ಹಾರಾಡುತ್ತಿದೆ. ಕಮಿನ್ಯುಸ್ಟ್ ಆಡಳಿತದಲ್ಲಿದ್ದ ಪಶ್ಚಿಮ ಬಂಗಾಳ ಇಂದು ಮೋದಿ, ಶಾ ಜೋಡಿಯ ತಂತ್ರಗಾರಿಕೆಗೆ ಒಲಿದಿದೆ. ಇದು ದಶಕಗಳ ಕನಸ್ಸಾಗಿತ್ತು ಎಂದು ಹೇಳಿದರು.ಪ್ರಮುಖರುಗಳಾದ ಸುಬ್ರಮಣಿ, ಕೊಣಿಯಂಡ ಬೋಜಮ್ಮ, ಚೈತ್ರ ಬಿ. ಚೇತನ್, ಚೇತನ್, ಪ್ರಭಾಕರ್ ನೆಲ್ಲಿತ್ತಾಯ, ದೀಪಕ್, ನೂರೇರರಂಜಿ, ಸುಬ್ರಮಣಿ, ಸುನೀಲ್‌ರೈ, ಧನಲಕ್ಷ್ಮಿ, ವಿವೇಕ್, ರಾಜೇಶ್ ಕೆ, ಅಖಿಲ್, ಸಾಜಿ ಇದ್ದರು.