ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಂಚರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಿನ್ನೆಲೆ ಪಟ್ಟಣದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್‌ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿಗೆ ಜೈಕಾರ ಹಾಕಿದರು.

ವಿಜಯೋತ್ಸವದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ ಎಂದರು.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿ ಸೋತಿದೆ, ಅಲ್ಲದೆ ದೇಶದಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ಒಂದೊಂದಾಗಿ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದರು.


ಎಲ್ಲಕ್ಕಿಂತ ಮುಖ್ಯವಾಗಿ ಪಶ್ವಿಮ ಬಂಗಾಳದಲ್ಲಿ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಅಲ್ಲಿನ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಪ್ರಧಾನ ಮಂತ್ರಿಗಳ ಜನಪರ ಕೆಲಸಗಳಿಗೆ ಮತದಾರ ಕೈ ಹಿಡಿದಿದ್ದಾನೆ ಎಂದರು.

ವಿಜಯೋತ್ಸವದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲ ಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಮಂಡಲ ಪ್ರಧಾನ ಕಾರ್ಯದರ್ಶಿ ಸುನೀಲ್‌, ಮಹೇಂದ್ರ, ಹಾಪ್‌ ಕಾಮ್ಸ್‌ ಅಧ್ಯಕ್ಷ ಕೆ.ಆರ್.ಲೋಕೇಶ್‌, ಪುರಸಭೆ ಮಾಜಿ ಸದಸ್ಯ ನಾಗೇಶ್‌, ಮುಖಂಡರಾದ ಕೊಡಸೋಗೆ ಶಿವಪ್ರಕಾಶ್‌, ಕಲ್ಲಹಳ್ಳಿ ಮಹೇಶ್, ಮಾಡಹಳ್ಳಿ ನಾಗೇಂದ್ರ, ಕೆ.ಎಸ್.ರೇವಣ್ಣ, ಹಂಗಳಪುರ ರೇವಣ್ಣ, ನಾಗೇಶ್‌, ಎಸ್.ಸಿ.ಮಂಜುನಾಥ್‌, ಹನುಮಂತ ಶೆಟ್ಟಿ, ದೇವರಹಳ್ಳಿ ಮಹೇಶ್‌, ಶಿವಪುರ ಮಂಜು, ಅಂಕಹಳ್ಳಿ ಮಹೇಂದ್ರ, ಬನ್ನಿತಾಳಪುರ ಮಹೇಶ್, ಕಬ್ಬಹಳ್ಳಿ ಮಹೇಶ್‌ ಸೇರಿದಂತೆ ಹಲವರಿದ್ದರು.