ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಮತದಾರರು ವಿಶ್ವಾಸವಿಟ್ಟು ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪರ ಜಯಘೋಷಗಳ ಕೂಗಿದರು.
ಈ ವೇಳೆ ಮಾತನಾಡಿದ ಅವರು, ದೇಶಾದ್ಯಂತ ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿರುವ ಜನರು ಬದಲಾವಣೆಯತ್ತ ಮುಖ ಮಾಡುತಿದ್ದಾರೆ. ಚುನಾವಣೆ ವೇಳೆ ಮತದಾರರಿಗೆ ಇನ್ನಿಲ್ಲದ ಭರವಸೆಗಳನ್ನು ನೀಡಿ ಗೆದ್ದ ಬಳಿಕ ಮತದಾರರನ್ನು ಮರೆತ ಕಾಂಗ್ರೆಸ್ ಪಕ್ಷಕ್ಕೆ ಜನರು ಸರಿಯಾದ ಪಾಠ ಕಲಿಸುತ್ತಾರೆ ಎನ್ನುವುದಕ್ಕೆ ಇಂದಿನ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ಈ ಫಲಿತಾಂಶ ನಮ್ಮ ರಾಜ್ಯದಲ್ಲೂ ಮರುಕಳಿಸಲಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ನಾಯಕತ್ವ ಹಾಗೂ ಉತ್ತಮ ಆಡಳಿತಕ್ಕೆ ಜನರ ಬೆಂಬಲ ಸಿಕ್ಕಿದೆ. ಈ ಮೂಲಕ ಬಿಜೆಪಿ ಮೇಲೆ ಜನರು ವಿಶ್ವಾಸ ಹೊಂದಿರುವುದನ್ನು ತೋರಿಸಿದಂತಾಗಿದೆ ಎಂದರು.
ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಹತ್ತಾರು ಜನಪರ ಯೋಜನೆ ನಿಲ್ಲಿಸುವ ಮೂಲಕ ಜನ ವಿರೋಧಿ ನೀತಿ ತೋರಿದೆ. ಆದರೂ ತಾವು ಉತ್ತಮ ಆಡಳಿತ ಕೊಡುತ್ತಿದ್ದೇವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಂದಿನ ದಿನದಲ್ಲಿ ರಾಜ್ಯದ ಜನರು ಪಾಠ ಕಲಿಸಲಿದ್ದಾರೆ ಎಂದರು.
ಈ ವೇಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಟಿ.ಶ್ರೀಧರ್, ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್, ನಗರ ಬಿಜೆಪಿ ಅಧ್ಯಕ್ಷ ಸುಧಾಕರ್, ಮುಖಂಡರಾದ, ಉಮೇಶ್ ಕುಮಾರ್, ಶಾಮಿಯಾನ ಪುಟ್ಟರಾಜು, ಪುಟ್ಟರಾಮು, ಮಂಜುನಾಥ್, ಪಾಲಹಳ್ಳಿ ಸುಕೇಶ್, ಗಂಜಾಂ ಶಿವು, ಹೇಮಂತ್ ಕುಮಾರ, ಕಿರಣ್ ಸಿಂಗ್, ಅಭಿ, ಜಯಲಕ್ಷ್ಮಮ್ಮ, ಕುಮಾರ, ಚಂದ್ರಶೇಖರ್, ರಾಜೇಶ್, ಚೇತನ್ ಸೇರಿದಂತೆ ಇತರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.