ನೇಹಾ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಧರಣಿ

| Published : Apr 24 2024, 02:23 AM IST

ಸಾರಾಂಶ

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ, ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ, ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಮಹಿಳಾ ಕಾರ್ಯಕರ್ತೆಯರು ಮೊಂಬತ್ತಿ ಬೆಳಗಿ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನೇಹಾ ಹಿರೇಮಠ ಹತ್ಯೆ ಪ್ರಕರಣವು ಕೇವಲ ನಮ್ಮ ದೇಶದಲ್ಲಿ ಮಾತ್ರ ಸುದ್ದಿಯಾಗಿಲ್ಲ, ಅದು ವಿದೇಶಗಳಲ್ಲೂ ಸುದ್ದಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯನ್ನು 13-14 ಬಾರಿ ಚುಚ್ಚಿ ಕೊಂದ ಘಟನೆ ಖಂಡನೀಯ. ಈ ಧೈರ್ಯ ಆರೋಪಿ ಫಯಾಜ್‌ಗೆ ಹೇಗೆ ಬಂತು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲಾ ಸಮಾಜದ್ರೋಹಿಗಳು, ದೇಶದ್ರೋಹಿಗಳ ಕೈ ಮೇಲಾಗುತ್ತಿದೆ. 2013ರಲ್ಲಿ ದೇಶದ್ರೋಹಿಗಳ ಸಂಘಟನೆ ಪಿಎಫ್‍ಐ, ಹಿಂದೂ ಯುವಕರನ್ನು ಕೊಲೆ ಮಾಡುತ್ತಿದ್ದರು. ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದರು. ಇಂಥವರ ವಿರುದ್ಧ ಪ್ರಕರಣವನ್ನು ಹಿಂಪಡೆಯಲಾಗಿತ್ತು. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಿದ್ದರೂ ಪ್ರಯೋಜನ ಆಗಲಿಲ್ಲ ಎಂದರು.

ರಾಜ್ಯದಲ್ಲಿ ನಡೆದ ರುದ್ರೇಶ್, ಪ್ರವೀಣ್ ನೆಟ್ಟಾರ್ ಮತ್ತಿತರ ಹಿಂದೂಗಳ ಹತ್ಯೆಯ ಮಾಹಿತಿ ಪಡೆದೇ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ, ಹೊರಕ್ಕೆ ಬಂದ ಪಿಎಫ್‍ಐ ಕಾರ್ಯಕರ್ತರು ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ರಾಮನವಮಿಯಂದೇ ಜೈಶ್ರೀರಾಂ ಎಂದು ಕೂಗಿದವರ ಮೇಲೆ ಹಲ್ಲೆ ನಡೆಯುತ್ತಿದೆ. ಅಲ್ಲಾ ಹೋ ಅಕ್ಬರ್ ಕೂಗಲು ಒತ್ತಾಯಿಸುತ್ತಾರೆ. ಕೊಡಗಿನಲ್ಲಿ ಪ್ರಚಾರ ಮುಗಿಸಿ ತೆರಳುವವರ ಮೇಲೆ ಅಲ್ಪಸಂಖ್ಯಾತನೊಬ್ಬ ಕಾರು ಹಾಯಿಸಿದ್ದಾನೆ. ಒಬ್ಬರು ಮೃತರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂದಿದ್ದಾರೆ. ಸರ್ಕಾರವು ಸಮಾಜದ್ರೋಹಿಗಳಿಗೆ ಭಯ ಹುಟ್ಟಿಸುವಂತೆ ಶಿಕ್ಷೆ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾ ರಾವ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.