ಸಾರಾಂಶ
ಸಿರುಗುಪ್ಪ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಒಂದು ಕೈಯಿಂದ ಹಣ ಕಿತ್ತುಕೊಂಡು ಇನ್ನೊಂದು ಕೈಗೆ ಕೊಡುವ ನೀತಿ ಕಾಂಗ್ರೆಸ್ ಅನುಸರಿಸುತ್ತಿದೆ.ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ತೂಗಿಸಲು ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಚಾಟಿ ಬೀಸಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಟೀಕಿಸಿದರು.ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡುವ ನೆಪದಲ್ಲಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧನ ಈವರೆಗೆ ನೀಡಿಲ್ಲ. ಹಾಲು ಉತ್ಪಾದಕ ರೈತರ ಹಿತ ಕಾಯುವ ಯಾವುದೇ ಯೋಜನೆ ಕಾಂಗ್ರೆಸ್ ಸರ್ಕಾರ ರೂಪಿಸಿಲ್ಲ. ಹೀಗಾಗಿಯೇ ಹಾಲು ಉತ್ಪಾದಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ರೈತರಿಗೆ ನೆರವಾಗಬೇಕು ಎಂಬ ತುಡಿತ ಇದ್ದರೆ ಹಾಲಿನ ಬೆಲೆ ಹೆಚ್ಚಳ ಮಾಡದೆ ನೇರವಾಗಿ ಸರ್ಕಾರವೇ ಹಾಲು ಉತ್ಪಾದಕರಿಗೆ ಹಣ ಒದಗಿಸಲಿ. ಆದರೆ, ಪದೇ ಪದೇ ಹಾಲಿನ ದರ ಏರಿಕೆ ಮಾಡುವುದರಿಂದ ಮಧ್ಯಮ ವರ್ಗದ ಜನರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಸಿರುಗುಪ್ಪ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಗಲ್ಲಿ ಗಲ್ಲಿಯಲ್ಲಿ ಮದ್ಯ ಮಾರಾಟ, ಮಟಕಾ, ಜೂಜಾಟ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಯಾವುದೇ ಕ್ರಮಗಳಾಗುತ್ತಿಲ್ಲ. ಮಟಕಾ, ಜೂಜಾಟದಿಂದ ಯುವಕರು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಪಕ್ಷದ ಮುಖಂಡ ದರಪ್ಪನಾಯಕ ಮಾತನಾಡಿದರು.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಸ್ವಾಮಿ, ಬಿಜೆಪಿ ಮುಖಂಡರಾದ ಮಹಾದೇವ, ಮೇಕಲಿ ವೀರೇಶ್, ಈರಣ್ಣ, ನಾಗೇಶಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.