ವೀರಭದ್ರನ ಗುಗ್ಗುಳ: ಕೆಂಡ ತುಳಿದ ಎಸ್ಸೆಸ್ಸೆಂ, ಮಕ್ಕಳು

| Published : Apr 12 2025, 12:48 AM IST

ಸಾರಾಂಶ

ವೀರಭದ್ರೇಶ್ವರ ಸ್ವಾಮಿಯ ಗುಗ್ಗುಳ, ಅಗ್ನಿಕುಂಡ ನಂತರ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ನೆರವೇರಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪುತ್ರ-ಪುತ್ರಿ ಸೇರಿದಂತೆ ಅಪಾರ ಭಕ್ತಾದಿಗಳು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.

ಹರಕೆ ತೀರಿಸಿದ ಭಕ್ತರು । ಸ್ವಾಮಿಯ ಪಲ್ಲಕ್ಕಿ ಉತ್ಸವ । ಉದ್ಯಮಿ ಎಸ್ಸೆಸ್ ಗಣೇಶ್‌, ಸಂಸದೆ ಡಾ.ಪ್ರಭಾ, ಗಣ್ಯರು ಭಾಗಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆ ಚೈತ್ರ ಶುದ್ಧ ಚತುರ್ದಶಿಯ ಶುಕ್ರವಾರ ಬೆಳಿಗ್ಗೆ ಇಲ್ಲಿನ ಹಳೆಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗುಳ, ಅಗ್ನಿಕುಂಡ ನಂತರ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ನೆರವೇರಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪುತ್ರ-ಪುತ್ರಿ ಸೇರಿದಂತೆ ಅಪಾರ ಭಕ್ತಾದಿಗಳು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.

ನಗರದ ಹಳೆಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯಿಂದ ಏ.12ರಂದು ಶ್ರೀ ಸ್ವಾಮಿಯ ರಥೋತ್ಸವ ನಡೆಯಲಿದ್ದು, ಅದರ ಮುನ್ನಾ ದಿನವಾದ ಶುಕ್ರವಾರ ಶ್ರೀ ಸ್ವಾಮಿಯ ಗುಗ್ಗುಳ, ಅಗ್ನಿಕುಂಡ ಸೇವೆಯು ಸಂಪನ್ನಗೊಂಡಿತು. ವೀರಭದ್ರ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಎಂದವರ ಅಜ್ಞಾನ ಹರಿಯೇ ಎಂಬುದಾಗಿ ಪುರವಂತರು, ಭಕ್ತಾದಿಗಳಿಂದ ಬಹುಪರಾಕ್‌ಗಳು ಮೊಳಗುತ್ತಿದ್ದವು.

ವೀರಭದ್ರೇಶ್ವರ ಸ್ವಾಮಿಯೊಂದಿಗೆ ಶಿವ, ಪಾರ್ವತಿ, ಗಣೇಶ, ಪ್ರಸೂತೋದೇವಿ, ದಕ್ಷಬ್ರಹ್ಮನ ಮೂರ್ತಿಗಳನ್ನಿಟ್ಟು ಅಲಂಕಾರದೊಂದಿಗೆ ಪೂಜೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌, ಪುತ್ರ ಸಮರ್ಥ ಎಂ.ಶಾಮನೂರು, ಪುತ್ರಿ ಶ್ರೇಷ್ಠ ಎಂ.ಶಾಮನೂರು ಜೊತೆಗೆ ಕೆಂಡ ತುಳಿದು, ಭಕ್ತಿ ಸಮರ್ಪಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಕೆಂಡ ತುಳಿಯುವ ಮೂಲಕ ತಮ್ಮ ಹರಕೆ, ಸೇವೆ ತೀರಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಉದ್ಯಮಿ ಎಸ್.ಎಸ್.ಗಣೇಶ್ ಇತರರು ಸ್ವಾಮಿಯ ದರ್ಶನ ಪಡೆದರು.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಕುದರಿ ವಿಶ್ವನಾಥ ಮಾತನಾಡಿ, ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಹಿನ್ನೆಲೆ ಯುಗಾದಿಯಂದು ತೇರು ಗಾಲಿ ಹೊರ ಹಾಕಲಾಯಿತು. ರಥೋತ್ಸವದ ಹಿಂದಿನ ಮಂಗಳವಾರ ಸ್ವಾಮಿಗೆ ಕಂಕಣಧಾರಣೆ, ಸುರಗಿ ಸುತ್ತುವುದು, ಜೋಳದ ಉಡಕ್ಕಿ ಹಾಕುವ ಕಾರ್ಯ ನಡೆದವು. ಗುರುವಾರ ತೇರಿಗೆ ಕಳಸವನ್ನಿಡಲಾಯಿತು. ಅಂದು ಮುಂಜಾನೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಹತ್ತಿ ಕಂಬ, ಹಾಲುಕಂಬ, ಬಾಸಿಂಗದೊಂದಿಗೆ ಇಲ್ಲಿಯೇ ಸಮೀಪ ಇರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಿಂದ ಗುಗ್ಗುಳ ಕೊಡ ತರಲಾಯಿತು ಎಂದರು.

ಗುಗ್ಗುಳದ ಮುಂಜಾನೆ ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ದೇವಸ್ಥಾನದ ಮುಂಭಾಗ ನಿರ್ಮಿಸಿದ ಅಗ್ನಿ ಕುಂಡದಲ್ಲಿ ಕಟ್ಟಿಗೆಗಳನ್ನು ಹಾಕಿ (ಪಟು ಮಾಡುವುದು) ಕೆಂಡ ಮಾಡಲಾಯಿತು ಸ್ವಾಮಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗಿತ್ತು. ಪುರುವಂತರು, ವೀರಭದ್ರ ದೇವರು ಕಟ್ಟಿಕೊಂಡವರು ಬಂದ ನಂತರ ದೇವಸ್ಥಾನದಲ್ಲಿ ಗುಗ್ಗುಳ ಕೊಡಗಳಿಗೆ (ಪಟುವು) ಕರ್ಪೂರದಿಂದ ಹಚ್ಚಿ, ಭಕ್ತರ ಸಮ್ಮುಖ ಬಾವುಟ (ಪಟ) ಹರಾಜು ಮಾಡಲಾಯಿತು. ಮಕ್ಕಳಾದಿಯಾಗಿ ಪುರುಷರು, ಮಹಿಳೆಯರು, ಯುವಕ-ಯುವತಿಯರು ಕೆಂಡ ತುಳಿದು ಭಕ್ತಿ ಸಮರ್ಪಿಸುವರು ಎಂದು ತಿಳಿಸಿದರು.

ಸ್ವಾಮಿಯ ಮೂರ್ತಿಯ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಭಕ್ತರು ಹರಕೆ ಹೊತ್ತು ಬಾಯಿಗೆ, ಮುಂಗೈಗೆ ಪುರುವಂತರಿಂದ ಶಸ್ತ್ರವನ್ನು (ತಾಮ್ರದ ತಂತಿ) ಹಾಕಿಸಿಕೊಳ್ಳುತ್ತಿದ್ದರು. ಪಲ್ಲಕ್ಕಿ ಮೆರವಣಿಗೆ ಮರಳಿ ದೇವಸ್ಥಾನಕ್ಕೆ ಬಂದ ನಂತರ ಗುಗ್ಗುಳ ಕೊಡಗಳ ಜ್ವಾಲೆಯಿಂದ ಹಾಲನ್ನು ಉಕ್ಕಿಸುವ ಮೂಲಕ ಗುಗ್ಗುಳ ಮುಕ್ತಾಯವಾಯಿತು. ಗುಗ್ಗುಳ ಕಾರ್ಯಕ್ಕೆ ದಾವಣಗೆರೆಯಷ್ಟೇ ಅಲ್ಲದೇ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಹಾವೇರಿ, ರಾಣೆಬೆನ್ನೂರು, ಚಿತ್ರದುರ್ಗ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.