ವಿದ್ಯುತ್ ಗ್ರಿಡ್ ಸ್ಥಾಪನೆಯಾಗಿ ೫ ವರ್ಷ ಕಳೆದರೂ ಸಹ ಇನ್ನೂ ಕಾರ್ಯಾರಂಭ ಮಾಡದ ಕಾರಣ ಬನವಾಸಿ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ಪ್ರತಿ ದಿನವೂ ವ್ಯತ್ಯಯವಾಗುತ್ತಿದೆ.

ಬನವಾಸಿಯ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಆರೋಪ

ಕನ್ನಡಪ್ರಭ ವಾರ್ತೆ ಶಿರಸಿ

ವಿದ್ಯುತ್ ಗ್ರಿಡ್ ಸ್ಥಾಪನೆಯಾಗಿ ೫ ವರ್ಷ ಕಳೆದರೂ ಸಹ ಇನ್ನೂ ಕಾರ್ಯಾರಂಭ ಮಾಡದ ಕಾರಣ ಬನವಾಸಿ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ಪ್ರತಿ ದಿನವೂ ವ್ಯತ್ಯಯವಾಗುತ್ತಿದೆ. ಕನ್ನಡಿಗರ ಮೊದಲ ರಾಜಧಾನಿ ಎಂದು ಗುರುತಿಸಿಕೊಂಡಿದ್ದರೂ ಬನವಾಸಿಯ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಬಿಜೆಪಿ ರೈತ ಮೋರ್ಚಾ ಹಾಗೂ ಬನವಾಸಿ ಬಿಜೆಪಿ ಮಂಡಳ ವತಿಯಿಂದ ನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.ಬನವಾಸಿ ಮಧುಕೇಶ್ವರ ದೇವಾಲಯದಿಂದ ಬೈಕ್ ರ‍್ಯಾಲಿ ಮೂಲಕ ಶಿರಸಿಗೆ ಆಗಮಿಸಿದ ಪ್ರತಿಭಟನಾಕಾರರು, ಮಾರಿಕಾಂಬಾ ದೇವಿಯ ದರ್ಶನ ಪಡೆದು ಬಳಿಕ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ಬಿಜೆಪಿ ಬನವಾಸಿ ಮಂಡಳದ ಅಧ್ಯಕ್ಷ ರಮೇಶನ ನಾಯ್ಕ ಕುಪ್ಪಳ್ಳಿ, ನಮಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಬೇಕಾಗಿರುತ್ತದೆ. ಕೊಳವೆ ಬಾವಿಗಳಲ್ಲಿ ೨೪ ಗಂಟೆಗಳ ಕಾಲ ನೀರಿರುತ್ತದೆ, ಆದರೆ ವಿದ್ಯುತ್ ಇರುವುದಿಲ್ಲ. ಅದೇ ರೀತಿಯಾಗಿ, ವೋಲ್ಟೇಜ್ ಕೊರತೆಯಿಂದಾಗಿ ಒಂದು ಫೇಸ್‌ನಲ್ಲಿ ೧೦೦ ವೋಲ್ಟೇಜ್ ಕೂಡ ಇರುವುದಿಲ್ಲ. ಒಟ್ಟು ಮೂರು ಫೇಸ್‌ಗಳಿಂದ ಕನಿಷ್ಠ ೨೮೦ ವೋಲ್ಟೇಜ್ ಸಿಗುತ್ತಿಲ್ಲ. ಇದರಿಂದಾಗಿ ರೈತರ ಅನೇಕ ಪಂಪ್‌ಸೆಟ್‌ಗಳು ಸುಟ್ಟು ಹೋಗಿವೆ. ಇದಕ್ಕೆಲ್ಲ ಹೊಣೆಗಾರರು ಯಾರು? ಎಂದು ಪ್ರಶ್ನಿಸಿದರು.ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಈ ವಿಷಯವನ್ನು ಗಮನಿಸಬೇಕು. ನಮ್ಮ ಸ್ಥಳೀಯ ಶಾಸಕರ ಬೇಜವಾಬ್ದಾರಿತನದಿಂದಾಗಿ ಇಲಾಖೆಯ ಗ್ರಿಡ್ ಆರಂಭವಾಗದೆ ಐದಾರು ವರ್ಷಗಳು ಕಳೆದಿವೆ. ಅಷ್ಟೇ ಅಲ್ಲದೆ, ಇಂದು ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿ, ತಮ್ಮ ಜೇಬನ್ನು ತುಂಬಿಸಿಕೊಂಡಿದ್ದಾರೆಯೇ ಹೊರತು ರೈತರಿಗೆ ಒಂದು ಪೈಸೆ ಪ್ರಯೋಜನವಾಗಿಲ್ಲ. ಇಂದಿನವರೆಗೂ ಒಂದು ಹನಿ ನೀರನ್ನು ಕೂಡ ಕೆರೆಗೆ ತುಂಬಿಸಿಲ್ಲ. ಹೀಗಿರುವಾಗ ಈ ಬೇಜವಾಬ್ದಾರಿ ಶಾಸಕರು ನಮಗೆ ಏಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ, ರೈತರು ಬೆಳೆದ ಶುಂಠಿ, ಅನಾನಸ್, ದೆಡಿಕೆ ಬೆಳೆ ಒಣಗುತ್ತಿದೆ. ಸ್ಥಳೀಯ ಶಾಸಕರ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ. ಬನವಾಸಿ ಭಾಗದಲ್ಲಿ ಗ್ರಿಡ್ ಆಗಿ ಐದಾರು ವರ್ಷ ಆದರೂ ಆ ಗ್ರಿಡ್ ಇಂದಿಗೂ ಕಾರ್ಯಾರಂಭ ಮಾಡಿಲ್ಲ ಎಂದರು.ಗ್ರಿಡ್‌ನಿಂದ ಪರ್ಯಾಯ ವ್ಯವಸ್ಥೆ ಮಾಡಿ ಒಂದು ತಿಂಗಳೊಳಗೆ ನಮಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಲೇಬೇಕು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ಈ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ನಂತರ ಅಧಿಕಾರಿಗಳು ಮಾತನಾಡಿ ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದರು.

ಈ ವೇಳೆ ಬನವಾಸಿ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಗಳಾದ ಶಂಕರ ಗೌಡ್ರು ಭಾಶಿ, ಮಂಜುನಾಥ ನಾಯ್ಕ, ಬನವಾಸಿ ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ವಿ.ಎಸ್. ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಲ ಸಣ್ಣಲಿಂಗಣ್ಣನವರ್, ಗೀತಾ, ಜ್ಯೋತಿ ಚೆನನಯ್ಯ, ಸತ್ಯವತಿ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ ಕಡಗೋಡ, ರವಿ ದೇವಾಡಿಗ, ಸಂತೋಷ ಗೌಡ ಭಾಶಿ, ಶಂಭುಲಿಂಗ ಗೌಡ, ರಾಘು ದೇವಾಡಿಗ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಾಯಿನಾಥ ಕುರುಬರ್, ವಿ.ಎಂ. ಹೆಗಡೆ ಕಬ್ಬೆ, ಆನಂದ ಸಾಲೇರ, ಉಷಾ ಹೆಗಡೆ, ರಮಾಕಾಂತ ಭಟ್, ನಾಗರಾಜ ನಾಯ್ಕ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುರೇಶ್ ನಾಯ್ಕ, ವಿಜಯ ಕುಮಾರ್ ಇತರರಿದ್ದರು.