ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಕೂಡಲೆ ಅವರನ್ನು ಬಂಧಿಸುವಂತೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಒತ್ತಾಯಿಸಿದರು.
ಹೊಸಪೇಟೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಕೂಡಲೆ ಅವರನ್ನು ಬಂಧಿಸುವಂತೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಒತ್ತಾಯಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣ ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ಜೀವಕ್ಕೆ ಅಪಾಯವೊಡ್ಡಿದೆ ಎಂದು ಆರೋಪಿಸಿದರು.ಅಸ್ಸಾಂನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು, ದೇಶಾದ್ಯಂತ ಇರುವ ಸಂಘ ಪರಿವಾರದ ಮೇಲೆ ಮಾಡಿರುವ ದಾಳಿಯಾಗಿದೆ. ಇದರ ಪರಿಣಾಮ ದೇಶವ್ಯಾಪಿ ಬೀರುವ ಸಂಭವವನ್ನು ತಳ್ಳಿಹಾಕಲಾಗದು. ಇವರ ಹೇಳಿಕೆಯು ಮತಿಗೇಡಿಗಳಿಗೆ ಉತ್ತೇಜನ ನೀಡಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ಸಂಭವಿಸಬಹುದಾಗಿದೆ ಎಂದರು.
ವಿವಿಧ ಧರ್ಮ, ಜನಾಂಗ, ಭಾಷೆ, ಪ್ರಾದೇಶಿಕ ಗುಂಪುಗಳು ಅಥವಾ ಸಮುದಾಯಗಳ ನಡುವೆ ದ್ವೇಷ, ಹಗೆತನ ಅಥವಾ ಕೆಟ್ಟ ಭಾವನೆಯನ್ನು ಉತ್ತೇಜಿಸುವುದನ್ನು ಇದು ನಿಷೇಧಿಸುತ್ತದೆ. ಇದರಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯಗಳೂ ಸೇರಿವೆ. ಅಲ್ಲದೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಪೊಲೀಸರು ಯಾವುದೇ ಔಪಚಾರಿಕ ದೂರುಗಳಿಗಾಗಿ ಕಾಯದೆ, ಇಂತಹ ಪ್ರಕರಣಗಳಲ್ಲಿ ತಾವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿರುವುದನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ ಎಂದು ಅವರು ಹೇಳಿದರು.ಪ್ರಚೋದನಾಕಾರಿ ಭಾಷಣ ಪರಿಣಾಮ ಉಂಟಾಗಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರನ್ನು ರಕ್ಷಿಸಲು ಭದ್ರತಾ ವ್ಯವಸ್ಥೆ ಮಾಡಬೇಕು. ಜೊತೆಗೆ ಲಕ್ಷಾಂತರ ಕಾರ್ಯಕರ್ತರನ್ನು ಕೊಲ್ಲಲು ಹೇಳಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಧುರಚನ್ನ ಶಾಸ್ತ್ರಿ ಹಿರೇಮಠ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಎಚ್. ರಾಘವೇಂದ್ರ, ಕೆ. ಮಧುಸೂದನ್, ಗೌಳಿ ಬಸವರಾಜ್, ಹನುಮಂತಪ್ಪ, ವ್ಯಾಸರಾಜ್, ಇಮ್ತಿಯಾಜ್, ರೇವಣ ಸಿದ್ದಪ್ಪ, ತಿರುಮಲೇಶ್, ವಿಕಾಸ್, ಶಶಿಕುಮಾರ್, ದೀಪಕ್, ರಾಘು, ಶಿವಾನಂದ, ಅಭಿಷೇಕ್, ವೀರೇಂದ್ರ ಗೌಡ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.