ಸಾರಾಂಶ
ರಾಜ್ಯಸಭೆಗೆ ಆಯ್ಕೆಯಾದ ನಾಸಿರ್ ಹುಸೇನ್ ಗೆಲುವಿನ ಸಂಭ್ರಮದಲ್ಲಿ ಘಟನೆ । ತಹಸೀಲ್ದಾರ್‌ಗೆ ಬಿಜೆಪಿ ಯುವ ಮೋರ್ಚಾ ಮನವಿ
ಕನ್ನಡಪ್ರಭ ವಾರ್ತೆ ಬೇಲೂರುಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸಿ ಕೂಡಲೇ ಗಡಿಪಾರು ಮಾಡಬೇಕು. ಇದಕ್ಕೆ ಕುಮ್ಮಕ್ಕು ನೀಡಿದ ರಾಜ್ಯಸಭೆ ಸದಸ್ಯ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾ ವತಿಯಿಂದ ಬುಧವಾರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ ಮಮತಾ ಅವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮಂಡಲದ ಅಧ್ಯಕ್ಷ ಅಡಗೂರು ಆನಂದ್, ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಸೈಯದ್ ನಾಸಿರ್ ಹುಸೇನ್ ಗೆಲುವಿನ ಸಂಭ್ರಮ ಆಚರಿಸುವಾಗ ಅವರ ಬೆಂಬಲಿಗರು ದೇಶದ್ರೋಹದ ಕೆಲಸ ಮಾಡಿದ್ದು ಪಾಕಿಸ್ತಾನ ಪರವಾಗಿ ಜಯಕಾರ ಕೂಗುವ ಮೂಲಕ ಅವರ ಕ್ರೂರ ಮನಸ್ಥಿತಿಯನ್ನು ಮತ್ತೊಮ್ಮೆ ಬಿಂಬಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಕೂಡಲೇ ಬಂಧಿಸುವ ಮೂಲಕ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಅಲ್ಲದೆ ಇಂತಹ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ. ಇದಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ ಹೀನ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಪಕ್ಷದ ಮುಖ್ಯಂಮತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು. ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ರವರು ದೇಶದ ಜನತೆಯ ಮುಂದೆ ಕ್ಷಮೆ ಕೇಳಬೇಕು ಎಂದರು.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ತಿನ್ನಲು ಅನ್ನ ಇಲ್ಲದ ಪಾಕಿಸ್ತಾನದ ಪರವಾಗಿ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಇಂತಹ ದೇಶದ್ರೋಹಿಗಳನ್ನು ಕೂಡಲೇ ಗುಂಡಿಕ್ಕಿ ಕೊಲ್ಲಬೇಕು. ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲೇ ಇಂತಹ ಮನಸ್ಥಿತಿ ಇರುವ ಕಾಂಗ್ರೆಸ್ ಪಕ್ಷದಲ್ಲಿ ಇನ್ನೆಷ್ಟು ದೇಶ ಸುಡುವ ವಿಷ ಜಂತುಗಳನ್ನು ತನ್ನ ಜೊತೆ ಇಟ್ಟುಕೊಂಡಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ, ಇಂತಹ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಿ. ತಮ್ಮ ಬೆಂಬಲಿಗರೇ ತಪ್ಪು ಮಾಡಿದ್ದರೂ ಸಹ ದೇಶದ ನಾಲ್ಕನೇ ಅಂಗವಾದ ಮಾದ್ಯಮದವರ ವಿರುದ್ಧ ಮಾತನಾಡಿರುವ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರಿಗೆ ನಿಜವಾದ ದೇಶದ ಬಗ್ಗೆ ಅಭಿಮಾನವಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಂತಹ ಕೆಟ್ಟ ಮನಸ್ಥಿತಿ ಇರುವಂತಹವರು ಸಂವಿಧಾನದಡಿ ಇರಲು ಯೋಗ್ಯತೆ ಇಲ್ಲ ಎಂದು ಕಿಡಿ ಕಾರಿದರು.ಯುವ ಮೋರ್ಚಾ ಅಧ್ಯಕ್ಷ ನವಿಲಹಳ್ಳಿ ಸುಮನ್ ಮಾತನಾಡಿ, ಇಂತಹ ಕೆಟ್ಟ ಜಿಹಾದಿಗಳನ್ನು ಹುಟ್ಟು ಹಾಕುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ನಮ್ಮ ದೇಶದ ಅನ್ನ, ನೀರು ಗಾಳಿಯನ್ನು ಕುಡಿಯುವ ಇಂತಹ ದೇಶದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ದೇಶ ವಿರೋಧಿಯನ್ನು ಕೂಡಲೇ ಬಂಧಿಸುವುದನ್ನು ಬಿಟ್ಟು ಕಣ್ಣೆದುರೇ ಸಾಕ್ಷಿ ಇದ್ದರೂ ಸಹ ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಆತನನ್ನು ಬಂಧಿಸದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಪಂ ಮಾಜಿ ಸದಸ್ಯ ಶಶಿಕುಮಾರ್, ಮಹಿಳಾ ಮೋರ್ಚಾದ ಶೋಭಾ ಗಣೇಶ್, ಸುಜಾತ, ಆನಂದ್ ವಿನಯ್, ಚಂದ್ರೇಗೌಡ, ರವಿಕುಮಾರ್, ಮೋಹನ್ ಗೌಡ, ಚಂದು ಇದ್ದರು.ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾ ವತಿಯಿಂದ ಬೇಲೂರು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.