ಕೆಪಿಎಸ್ಸಿ ಆ. 27ರಂದು ನಡೆಸಲು ಉದ್ದೇಶಿಸಿರುವ ಗೆಜೆಟೆಡ್‌ ಪ್ರೊಬೇಷನರ್ಸ್‌ ಪರೀಕ್ಷೆ ಮುಂದೂಡಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ ವಿಜಯನಗರ ಪೊಲೀಸ್‌ ಠಾಣೆ ಎದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆ. 27ರಂದು ನಡೆಸಲು ಉದ್ದೇಶಿಸಿರುವ ಗೆಜೆಟೆಡ್‌ ಪ್ರೊಬೇಷನರ್ಸ್‌ ಪರೀಕ್ಷೆ ಮುಂದೂಡಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ ವಿಜಯನಗರ ಪೊಲೀಸ್‌ ಠಾಣೆ ಎದುರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್‌ ಮುನಿರಾಜು ನೇತೃತ್ವದಲ್ಲಿ ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವಾಯಿತು. ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರತ್ತ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಲು ಮುಂದಾದರು. ಈ ವೇಳೆ ಕೆಲ ಕಾರ್ಯಕರ್ತರ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾದ ಪ್ರಸಂಗ ಜರುಗಿತು.

==

ಪೊಲೀಸರಿಂದ ದೌರ್ಜನ್ಯ: ಧೀರಜ್‌ ಮುನಿರಾಜ್‌ ಆರೋಪ

ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ನ್ಯಾಯಯುತ ಬೇಡಿಕೆ ಮುಂದಿಟ್ಟು ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ಬಂಧಿಸಿ, ಬಳಿಕ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದು ಖಂಡನೀಯ ಎಂದು ಧೀರಜ್‌ ಮುನಿರಾಜ್‌ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಪೊಲೀಸ್‌ ಬಲದ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಖಂಡನಾರ್ಹ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್‌ ರೆಡ್ಡಿ ಕಿಡಿಕಾರಿದರು.