ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಪಕ್ಷದ ಘಟಾನುಘಟಿ ನಾಯಕರೇ ಬಂದು ಪ್ರಚಾರಕ್ಕೆ ಧುಮುಕಿದರೂ ಬಿಜೆಪಿಯ ಬಿರುಗಾಳಿಗೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಕೊಚ್ಚಿ ಹೋಗಿದೆ.
ಬಸವರಾಜ ಹಿರೇಮಠ
ಧಾರವಾಡ:ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಪಕ್ಷದ ಘಟಾನುಘಟಿ ನಾಯಕರೇ ಬಂದು ಪ್ರಚಾರಕ್ಕೆ ಧುಮುಕಿದರೂ ಬಿಜೆಪಿಯ ಬಿರುಗಾಳಿಗೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಕೊಚ್ಚಿ ಹೋಗಿದೆ. ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರು ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ.
ಈ ಕ್ಷೇತ್ರವನ್ನು ಮರಳಿ ಪಡೆಯುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಚ್.ಕೆ. ಪಾಟೀಲ, ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ಸಿನ ಇತರ ಹಿರಿಯ ನಾಯಕರು ಮೋಹನ ಲಿಂಬಿಕಾಯಿ ಪರವಾಗಿ ವ್ಯಾಪಕ ಪ್ರಚಾರ ನಡೆಸಿದರು. ಇಷ್ಟಾಗಿಯೂ ಲಿಂಬಿಕಾಯಿ, ಪ್ರತಿಸ್ಪರ್ಧಿ ಸಂಕನೂರ ವಿರುದ್ಧ 9,323 ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಬೇಕಾಯಿತು.ರಾತ್ರಿ 2ಕ್ಕೆ ಎಣಿಕೆ ಮುಕ್ತಾಯ:
ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಮಂಗಳವಾರ ನಡೆದ ಮತ ಎಣಿಕೆಯ ಆರಂಭದಿಂದಲೂ ಪ್ರತಿ ಸುತ್ತಿನಲ್ಲೂ ಸರಾಸರಿ 2000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದ ಸಂಕನೂರು ಅವರು ತಡರಾತ್ರಿ 2ಕ್ಕೆ ಕೊನೆ ಸುತ್ತು ಮುಗಿದಾಗ 33,711 ಪ್ರಥಮ ಆದ್ಯತೆಯ ಮತ ಪಡೆದರೆ ಪ್ರತಿಸ್ಪರ್ಧಿ ಮೋಹನ ಲಿಂಬಿಕಾಯಿ 24,388 ಮತ ಪಡೆದು ಪರಾಭವಗೊಂಡರು. 2014ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಕನೂರು, ಸತತ ಮೂರನೇ ಅವಧಿಗೂ ಸ್ಥಾನ ಉಳಿಸಿಕೊಂಡರು. ಈ ಮೂಲಕ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿ ಹಿಡಿತ ಮತ್ತಷ್ಟು ಬಲಗೊಂಡಂತಾಗಿದೆ.10 ಸಾವಿರಕ್ಕೂ ಹೆಚ್ಚು ತಿರಸ್ಕೃತ:
ಅ. 23ರಂದು ನಡೆದ ಮತದಾನದಲ್ಲಿ ಒಟ್ಟು 97,400 ನೋಂದಾಯಿತ ಮತದಾರರ ಪೈಕಿ 73,658 ಮಂದಿ ಮತ ಚಲಾಯಿಸಿದ್ದು, ಶೇ. 75.62 ರಷ್ಟು ಮತದಾನ ದಾಖಲಾಗಿತ್ತು. ಇದರಲ್ಲಿ 63,446 ಮತ ಸಿಂಧುವಾದರೆ, 10,245 ಮತ ತಿರಸ್ಕೃತಗೊಂಡಿವೆ.ಪ್ರಚಾರ ವೈಫಲ್ಯ:
ಚುನಾವಣೆ ಏಳೆಂಟು ತಿಂಗಳು ಮೊದಲೇ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಅಖೈರು ಮಾಡಿದ್ದರೂ ಚುನಾವಣೆ ಪ್ರಚಾರದಲ್ಲಿ ವೈಫಲ್ಯವನ್ನು ಅನುಭವಿಸಿದಂತೆ ಆಗಿದೆ. ಪ್ರಚಾರದಲ್ಲಿ ಹಿರಿಯ ನಾಯಕತ್ವದ ಸಕ್ರಿಯ ಭಾಗವಹಿಸುವಿಕೆ ಇದ್ದರೂ ತಳಮಟ್ಟದಲ್ಲಿ ಮತದಾರರನ್ನು ಮುಟ್ಟುವಲ್ಲಿ ಯಶಸ್ವಿಯಾಗದೆ ಹಿನ್ನೆಲೆ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಸೋಲು ಅನುಭವಿಸುವಂತೆ ಆಗಿದೆ.ಯಾರಿಗೆ ಎಷ್ಟು ಮತ...
ಸ್ವತಂತ್ರ ಅಭ್ಯರ್ಥಿ ಕಾಂತಕುಮಾರ್ ಆರ್. 4,055 ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇವರ ನಂತರ ಸ್ವತಂತ್ರ ಅಭ್ಯರ್ಥಿಗಳಾದ ಡಾ. ಜಿ.ಎಚ್. ಇಮ್ರಾಪುರ (338 ಮತ) ಮತ್ತು ಉಮೇಶ್ ಕೃಷ್ಣಪ್ಪ ದೈವಜ್ಞ (228 ಮತ) ಇದ್ದಾರೆ. ಉಳಿದ ಅಭ್ಯರ್ಥಿಗಳಲ್ಲಿ ನಿಶಾಂತ್ ಶಂಕರ್ ಬಂಕಾಪುರ (143), ಕರ್ನಾಟಕ ರಾಷ್ಟ್ರ ಸಮಿತಿಯ ಕೃಷ್ಣ ಎಚ್. ಬಲೇಗರ್ (141), ಅಬ್ದುಲ್ ಮನ್ನಾನ್ (120), ಸಂತೋಷ ಮನೋಹರ್ ವರ್ಣೇಕರ್ (85), ಜಿಶಾನ್ ಅಹ್ಮದ್ಖಾನ್ ಪಠಾಣ್ (62), ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ್ (55), ಶಿವಕುಮಾರ್ ತಳವಾರ (42) ಹಾಗೂ ಜಿಶಾನ್ ಡಿ. ಶಿರಸಂಗಿ ಮತ್ತು ಬಸವರಾಜ ಶಂಕರಪ್ಪ ಕೋಟಗಿ ತಲಾ 39 ಮತಪಡೆದರು.ಶೇ. 14ರಷ್ಟು ಅಸಿಂಧು..
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹೆಸರೇ ಸೂಚಿಸುವಂತೆ ನೋಂದಾಯಿತ ಪದವಿಧರರು ಮಾತ್ರ ಮತ ಚಲಾಯಿಸಿದ್ದಾರೆ. ಆದರೆ, ಅಭ್ಯರ್ಥಿಗಳ ಮೇಲಿನ ಕೋಪವೋ, ಉದ್ದೇಶ ಪೂರ್ವಕವಾಗಿಯೋ, ವ್ಯವಸ್ಥೆ ಮೇಲಿನ ಬೇಸರವೋ ಅಥವಾ ಮತದಾನದ ತಿಳಿವಳಿಕೆ ಕೊರತೆಯಿಂದಲೂ ಬರೋಬ್ಬರಿ 10,245 ಮತ (ಶೇ.14ರಷ್ಟು) ಅಸಿಂಧುವಾಗಿವೆ. ಚುನಾವಣೆಯಲ್ಲಿ ಸಂಕನೂರ, ಲಿಂಬಿಕಾಯಿ ಪಡೆದ ಮತಗಳ ಬಳಿಕ ಅಸಿಂಧು ಮತಗಳ ಸಂಖ್ಯೆಯೇ ಅಧಿಕವಾಗಿದೆ. ಪದವೀಧರ ಮತದಾರರೇ ಈ ರೀತಿ ತಪ್ಪು ತಪ್ಪಾಗಿ ಮತ ಚಲಾಯಿಸಿದರೆ ಹೇಗೆ ಎಂಬ ಮಾತುಗಳು ಕೇಳಿಬಂದಿವೆ. ಬಹಳಷ್ಟು ಮತದಾರರು ಅಭ್ಯರ್ಥಿಗಳ ಹೆಸರಿನ ಮುಂದೆ ಪಾಸ್ ಗುರುತು, ಚಿತ್ರ ಬಿಡಿಸುವುದು, ಪದವೀಧರರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿತ್ತು ಎಂಬಿತ್ಯಾದಿ ಬರೆಯುವ ಮೂಲಕ ಅಸಿಂಧುವಾಗಿವೆ. ಮತ್ತೆ ಕೆಲವರು ಅಭ್ಯರ್ಥಿ ಎದುರು ಸರಿಯಾಗಿ ಪ್ರಾಶಸ್ತ್ಯ ಮತ ಹಾಕಿದ್ದು, ಉಳಿದ ಅಭ್ಯರ್ಥಿಗಳ ಹೆಸರಿನ ಮುಂದೆ - ಇಂತಹ ಚಿಹ್ನೆ ಬಳಸಿದ್ದಾರೆ.ಪದವೀಧರರಿಗಾಗಿ ಎರಡು ಅವಧಿಯಲ್ಲಿ ಮಾಡಿದ ಕಾರ್ಯ, ಬಿಜೆಪಿ ಮುಖಂಡರ, ಕಾರ್ಯಕರ್ತರ ಪ್ರಯತ್ನ ಹಾಗೂ ಕ್ಷೇತ್ರದ ಪದವೀಧರರ ಆಶೀರ್ವಾದದಿಂದ ಸತತ ಮೂರನೇ ಬಾರಿ ಈ ಕ್ಷೇತ್ರಕ್ಕೆ ಆಯ್ಕೆಯಾಗಿದ್ದೇನೆ. ಬರುವ ದಿನಗಳಲ್ಲಿ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ.
ಎಸ್.ವಿ. ಸಂಕನೂರ