ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹನುಮಧ್ವಜ ಸಮಿತಿಯಿಂದ ಮಂಗಳವಾರ ಕರಾಳ ದಿನ ಆಚರಿಸಲಾಯಿತು.ಕರಾಳ ದಿನದ ಅಂಗವಾಗಿ ಗ್ರಾಮದ ಪೆಟ್ರೋಲ್ ಬಂಕ್ ನಿಂದ ಅರ್ಜುನ ಧ್ವಜ ಸ್ತಂಭದವರೆಗೆ ಶಾಂತಿಯುತವಾಗಿ ನಡೆಯಿತು.
ಹನುಮ ಭಕ್ತರು ಮತ್ತು ಹಿಂದೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅರ್ಜುನ ಧ್ವಜಸ್ತಂಭದ ಮುಂಭಾಗ ರಂಗೋಲಿಯಲ್ಲಿ ಹನುಮಧ್ವಜವನ್ನು ಅರಳಿಸಲಾಗಿತ್ತು. ಹೂವುಗಳಿಂದ ರಂಗೋಲಿ ಧ್ವಜ ಸಿಂಗಾರಗೊಂಡಿತ್ತು.ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಅಂಕನ ದೊಡ್ಡಿಗೆ ಆಗಮಿಸಿದ್ದರು. ಹಿಂದೂ ಕಾರ್ಯಕರ್ತರ ಮನೆಯಲ್ಲಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಲು ಕೆರಗೋಡು ಪೊಲೀಸರು ಮುಂದಾಗಿದ್ದರು. ಈ ವಿಷಯ ತಿಳಿದ ಹಿಂದೂ ಕಾರ್ಯಕರ್ತರು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗಿದರು. ಈ ಬೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪುನೀತ್ ಅವರನ್ನು ನಮ್ಮ ಜೊತೆ ಕಳುಹಿಸಿ ಕೊಡುವಂತೆ ಹಿಂದೂ ಕಾರ್ಯಕರ್ತರು ಬಿಗಿಪಟ್ಟು ಹಿಡಿದರು.
ನಂತರ ಮಾತನಾಡಿದ ಪುನೀತ್ ಕೆರೆಹಟ್ಟಿ ಅವರು, ಕೆರಗೋಡು ಗ್ರಾಮದಲ್ಲಿ ಶಾಂತಿಯುತವಾಗಿ ಪಂಜಿನ ಮೆರವಣಿಗೆ ಮತ್ತು ಕರಾಳ ದಿನ ಹಾಕಿರಿಸಲಾಗುತ್ತಿದೆ. ಹಿಂದೂಗಳು ಸಂಘಟನೆಗೊಳ್ಳದಂತೆ ತಡೆಯುವುದು ಕಾಂಗ್ರೆಸ್ ಸರ್ಕಾರದ ಹುನ್ನಾರವಾಗಿದೆ. ನನ್ನನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಯಲು ಯಾವ ಆದೇಶ ಇದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧ್ಯಕ್ಷರು ನನ್ನನ್ನು ಜಿಲ್ಲೆಗೆ ಬರದಂತೆ ತಡೆಯಲು ನಿರ್ಬಂಧ ಹೇರಿದ್ದಾರೆ. ಪೊಲೀಸರು ಯಾವುದೇ ಆದೇಶವಿಲ್ಲದಿದ್ದರೂ ನನ್ನನ್ನು ಉದ್ದೇಶಪೂರ್ವಕವಾಗಿ ತಡೆ ಹಿಡಿದಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದ್ದು ನನ್ನ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.ಪೊಲೀಸರು ರೌಡಿಗಳಂತೆ ವರ್ತಿಸುತ್ತಿದ್ದಾರೆ. ತುಗಲಕ್ ಸರ್ಕಾರದ ರೌಡಿಸಂ ಖಂಡನೀಯ. ನನ್ನಿಂದ ಈ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ವಾಪಸ್ ಆಗಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ಭಾವೋದ್ವೇಗಕ್ಕೆ ಒಳಗಾಗುವುದು ಬೇಡ. ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಪ್ರಕರಣ ದಾಖಲಿಸುವುದು ಬೇಡ. ಮುಂದಿನ ದಿನಗಳಲ್ಲಿ ನಾನು ಕೆರಗೋಡಿಗೆ ಬಂದೇ ಬರುತ್ತೇನೆ. ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದು ಅಲ್ಲಿಂದ ನಿರ್ಗಮಿಸಿದರು.