ಬುಧವಾರ ಬೆಳಗ್ಗೆ ಬಳಗಾರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಪ್ಪು ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಇದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಲ್ಲಾಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಕಪ್ಪು ಚಿರತೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ೫೨ರಲ್ಲಿ ತಾಲೂಕಿನ ಬಳಗಾರ ಕ್ರಾಸ್ ಬಳಿ ನಡೆದಿದೆ.

ಬುಧವಾರ ಬೆಳಗ್ಗೆ ಬಳಗಾರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಪ್ಪು ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಇದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಮುದ್ರದ ಸುಳಿಗೆ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ವಾಟರ್ ಸ್ಪೋರ್ಟ್ಸ್‌ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ಕುಡ್ಲೆ ಕಡಲತೀರದಲ್ಲಿ ನಡೆದಿದೆ.ಬಿಹಾರ ಮೂಲದ ಹಾಲಿ ಬೆಂಗಳೂರಿನಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಮನುರಾಜ (೨೨) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗ. ಇವರು ತಮ್ಮ ಗೆಳೆಯರೊಡನೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ನೀರಿಗಿಳಿದು ಆಟವಾಡುತ್ತಿರುವಾಗ ಅಲೆಯ ಅಬ್ಬರಕ್ಕೆ ಪ್ರವಾಸಿಗ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಮೈಸ್ಟಿಕ್ ಅಡ್ವೆಂಚರ್ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿ ದಡಕ್ಕೆ ತಂದಿದ್ದಾರೆ. ನಂತರ ಖಾಸಗಿ ಆ್ಯಂಬುಲೆನ್ಸ್‌ ಮೂಲಕ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಕಳುಹಿಸಿಕೊಡಲಾಗಿದೆ.ಹುಲ್ಲು ಸಾಗಿಸುತ್ತಿದ್ದ ವಾಹನ ಬೆಂಕಿಗೆ ಆಹುತಿ

ಯಲ್ಲಾಪುರ: ಹುಲ್ಲು ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಬಿಸಗೋಡ ಸಮೀಪದ ಹೊಸ್ಮನೆ ಬಳಿ ನಡೆದಿದೆ.ಕಲಘಟಗಿ ತಾಲೂಕಿನ ತಂಬೂರು ಗ್ರಾಮದ ಚನ್ನಬಸಯ್ಯ ಎಂಬವರಿಗೆ ಸೇರಿದ ಬೊಲೆರೋ ಪಿಕಪ್ ವಾಹನದಲ್ಲಿ ೬೫ ಪಿಂಡಿ ಹುಲ್ಲನ್ನು ಸಾಗಿಸಲಾಗುತ್ತಿತ್ತು. ಬಿಸಗೋಡ ಗ್ರಾಮದ ಸಮೀಪ ಬರುತ್ತಿದ್ದಂತೆಯೇ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಒಣಹುಲ್ಲು ಇದ್ದ ಕಾರಣ ಕೆಲವೇ ಕ್ಷಣದಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿಕೊಂಡಿದೆ.ವಿಷಯ ತಿಳಿದು ಯಲ್ಲಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ನೀರು ಹಾಯಿಸುವ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟರಲ್ಲಾಗಲೇ ವಾಹನ ಮತ್ತು ಹುಲ್ಲು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರುಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.