ಸಾರಾಂಶ
ಈಚೆಗೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನು ಆಂಗ್ಲ ಭಾಷೆಯಲ್ಲಿ ಹಾಕುತ್ತಿದ್ದು, ಇದರಿಂದ ಕನ್ನಡನಾಡಿನಲ್ಲಿಯೇ ಕನ್ನಡ ಭಾಷೆ ನಶಿಸುವ ಹಂತಕ್ಕೆ ತಲುಪುತ್ತಿದೆ ಎಂದು ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಡಿ ಕಟ್ಟಿಮನಿ ಆತಂಕ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಹೊಳಲ್ಕೆರೆ ಪಟ್ಟಣದಲ್ಲಿರುವ ಅಂಗಡಿಗಳು, ಹೊಟೇಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಇನ್ನಿತರ ಎಲ್ಲ ತರಹದ ಅಂಗಡಿಗಳ ನಾಮಫಲಕಗಳು ಶೇಕಡ 60ರಷ್ಟು ಕನ್ನಡದಲ್ಲಿರಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಮಾಡಿದ್ದು, ಈ ಆದೇಶದ ಅನುಸಾರವಾಗಿ ಹೊಳಲ್ಕೆರೆ ಪಟ್ಟಣದ ಪುರಸಭೆಯ ವತಿಯಿಂದ ಆಂಗ್ಲ ಭಾಷೆಯ ನಾಮಫಲಕಗಳ ತೆರವು ಕಾರ್ಯಾಚರಣೆಯು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಾ ಡಿ ಕಟ್ಟಿಮನಿ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಪುರಸಭೆ ಮುಖ್ಯಾಧಿಕಾರಿ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಉದ್ದಿಮೆಗಳ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನು ಆಂಗ್ಲ ಭಾಷೆಯಲ್ಲಿ ಹಾಕುತ್ತಿದ್ದು, ಇದರಿಂದ ಕನ್ನಡನಾಡಿನಲ್ಲಿಯೇ ಕನ್ನಡ ಭಾಷೆ ನಶಿಸುವ ಹಂತಕ್ಕೆ ತಲುಪುತ್ತಿದೆ. ಇದನ್ನು ಮನಗಂಡ ಕನ್ನಡೇತರ ಸಂಘಟನೆಗಳ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಈಗಾಗಲೇ ಆಂಗ್ಲ ಭಾಷೆ ನಾಮಫಲಕಗಳಿಗೆ ತೆರವುಗೊಳಿಸುವ ಕುರಿತು ಪುರಸಭೆಯ ಗಾಡಿಗಳಲ್ಲಿ ಪ್ರಚಾರ ನಡೆಸಿದ್ದು ಆದರೂ ಎಚ್ಚೆತ್ತುಕೊಳ್ಳದ ಅಂಗಡಿಗಳ ನಾಮಫಲಕದಲ್ಲಿರುವ ಆಂಗ್ಲಭಾಷೆ ಫಲಕಗಳಿಗೆ ಪುರಸಭೆಯ ಸಿಬ್ಬಂದಿ ಕಪ್ಪು ಮಸಿಯನ್ನು ಬಳಿಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಆಂಗ್ಲಭಾಷೆಯ ನಾಮಫಲಕಗಳು ತೆರವು ಗೊಂಡು ಕನ್ನಡ ನಾಮಫಲಕಗಳನ್ನು ಹಾಕದೇ ಹೋದರೆ ಅಂಗಡಿ ಮಾಲೀಕರಿಗೆ ದಂಡ ಹಾಕುವುದರ ಜೊತೆಗೆ ದೂರು ದಾಖಲಿಸಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ಅಂಗಡಿ ಮಾಲೀಕರು ಇಂಗ್ಲಿಷ್ ನಾಮಫಲಕ ತೆರವು ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪಿ . ಹನು ಮಂತಪ್ಪ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರಾದ ಮಹಮ್ಮದ್ ಶೌಕತ್ ಅಲಿ, ಪ್ರಶಾಂತ್ ಹೆಚ್. ಹಾಗೂ ಕರುನಾಡು ಚಾಲಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.