ಇಂಡಿ ಪುರಸಭೆಯಲ್ಲಿ ಭ್ರಷ್ಟಾಚಾರದ : ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಂದ ಹಣ ವಸೂಲಿ - ಸದಸ್ಯರಿಂದ ಗಂಭೀರ ಆರೋಪ

| Published : Sep 05 2024, 02:20 AM IST / Updated: Sep 05 2024, 08:19 AM IST

ಇಂಡಿ ಪುರಸಭೆಯಲ್ಲಿ ಭ್ರಷ್ಟಾಚಾರದ : ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಂದ ಹಣ ವಸೂಲಿ - ಸದಸ್ಯರಿಂದ ಗಂಭೀರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ ಪುರಸಭೆಯಲ್ಲಿ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಸದಸ್ಯ ಉಮೇಶ ದೇಗಿನಾಳ ಆರೋಪಿಸಿದ್ದಾರೆ. ಅಪೂರ್ಣ ಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

 ಇಂಡಿ :  ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿಯೊಬ್ಬರು ಪ್ರಾಮಾಣಿಕರು, ಉಳಿದ ಸಿಬ್ಬಂದಿ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ನೀವೊಬ್ಬರು ಪ್ರಾಮಾಣಿಕರಾದರೇ ಕಚೇರಿ ಸುಧಾರಣೆಯಾಗುತ್ತದೆಯೇ? ಸಾರ್ವಜನಿಕರ ಕೆಲಸಗಳಿಗೆ ಹಣ ಕೇಳುವ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳಬೇಕು. ಅವರು ನಿರ್ವಹಿಸುವ ಟೆಬಲ್‌ ಬದಲಾವಣೆ ಮಾಡಬೇಕು ಎಂದು ಸದಸ್ಯ ಉಮೇಶ ದೇಗಿನಾಳ ಸಭೆಯಲ್ಲಿ ದೂರಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಗಭೀರ ಆರೋಪ ಮಾಡಿದ ಅವರು, ವಾರ್ಡ್‌ನಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ 2 ವರ್ಷವಾಯಿತು. ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಹೀಗಾದರೇ ವಾರ್ಡ್‌ ಅಭಿವೃದ್ಧಿ ಹೇಗೆ ಸಾಧ್ಯವೆಂದು ಸಭೆಯ ಗಮನ ಸೆಳೆದರು. ನಗರದಲ್ಲಿ ನಡೆದಿರುವ ನಗರೋತ್ಥಾನ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಅಪೂರ್ಣ ಕಾಮಗಾರಿ ಮಾಡಿ ಬಿಲ್‌ ತೆಗೆದುಕೊಂಡು ಹೋಗುತ್ತಿದ್ದಾರೆ. 

ವಾರ್ಡ್‌ನಲ್ಲಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಂಡಿದೆಯೇ ಎಂಬ ಬಗ್ಗೆ ವಾರ್ಡ್‌ ಸದಸ್ಯರ ಗಮನಕ್ಕೆ ತರದೇ ಬಿಲ್‌ ತೆಗೆಯಲಾಗುತ್ತದೆ. ವಾರ್ಡ್‌ ಜನರು ಕಾಮಗಾರಿ ಪೂರ್ಣಗೊಂಡಿರುವುದಿಲ್ಲ ಎಂದು ಸದಸ್ಯರ ಮನೆಗೆ ಬರುತ್ತಾರೆ. ನಾವು ವಾರ್ಡ್‌ ನಾಗರಿಕರಿಗೆ ಏನು ಉತ್ತರ ನೀಡಬೇಕು. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕು. 

ಪುರಸಭೆಯಿಂದ ಅಂತವರಿಗೆ ಯಾವುದೇ ಕಾಮಗಾರಿ ನೀಡಬಾರದು ಎಂದು ಕೆಲ ಸದಸ್ಯರು ಒತ್ತಾಯಿಸಿದರು. ವಾರ್ಡ್‌ 17 ರಲ್ಲಿ ಸಿಸಿ ರಸ್ತೆ, ಒಳಚರಂಡಿ ಕಾಮಗಾರಿ ಕೈಗೊಂಡಿದ್ದರಿಂದ ಗುತ್ತಿಗೆದಾರರು ತಗ್ಗು ತೊಡಿ ಹೋಗಿ ತಿಂಗಳಾಯಿತು. ವಾರ್ಡ್‌ ಜನರು ತಗ್ಗಿನಲ್ಲಿ ಬಿದ್ದು ತೊಂದರೇ ಅನುಭಸುತ್ತಿದ್ದಾರೆ. ಹೀಗಾದರೇ ಹೇಗೆ ಎಂದು ವಾರ್ಡ್‌ ಸದಸ್ಯ ಅಯೂಬ್‌ ಬಾಗವಾನ ಹಾಗೂ ಅಸ್ಲಮ ಕಡಣಿ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು. ಕಾಮಗಾರಿ ಮಾಡುವಾಗ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋಗಿವೆ. 

ಅವುಗಳು ದುರಸ್ತಿ ಮಾಡುತ್ತಿಲ್ಲ ಎಂದು ದೂರಿದರು. ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿಕೊಡಲಾಗುವುದು ಎಂದು ಅಧ್ಯಕ್ಷ ಲಿಂಬಾಜಿ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಭರವಸೆ ನೀಡಿದರು. ಹೈಮಾಸ್‌ ಅಳವಡಿಸುವ ಕಾಮಗಾರಿಯೂ ಕಳಪೆಯಾಗಿವೆ. ನಗರೋತ್ಥಾನ ಕಾಮಗಾರಿಯೂ ಸರಿಯಾಗಿ ನಡೆದಿರುವುದಿಲ್ಲ. ಹೀಗಾಗಿ ಎಲ್ಲ ಕಾಮಗಾರಿಗಳ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಸದಸ್ಯ ಇಸ್ಮಾಯಿಲ್‌ ಅರಬ ಸಭೆಯಲ್ಲಿ ತಿಳಿಸಿದರು. 

ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಕಸ ತುಂಬುವ ಬಕೆಟ್‌ಗಳ ಖರೀದಿಗೆ ಟೆಂಡರ್‌ ಕರೆಯುವ ಕುರಿತು 3 ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇದೆ.ಕಸತುಂಬುವ ಬಕೆಟ್‌ ಯಾವಾಗ ಖರೀದಿ ಮಾಡಿ ಸಾರ್ವಜನಿಕರಿಗೆ ನೀಡುತ್ತಿರಿ ಎಂದು ಪ್ರಶ್ನಿಸಿದರು. ಹಿಂದಿನ ಶಾಸಕ ರವಿಕಾಂತ ಪಾಟೀಲ ಅವರು ಶಾಸಕರಿದ್ದ ಅವಧಿಯಲ್ಲಿ ನಗರದಲ್ಲಿ ಜಮೀನು ಖರೀದಿಸಿ ಬಡವರಿಗೆ ನಿವೇಶ ಹಂಚಿಕೆ ಮಾಡಿದ್ದು ಬಿಟ್ಟರೇ ಮುಂದಿನ ಯಾವ ಶಾಸಕರು ಜಮೀನು ಖರೀದಿ ಮಾಡಿ ಬಡವರಿಗೆ ಹಂಚಿಕೆ ಮಾಡುವ ಕೆಲಸ ಮಾಡಿರುವುದಿಲ್ಲ. 

ನಗರದಲ್ಲಿ 50 ಸಾವಿರ ಜನಸಂಖ್ಯೆ ಇದೆ. ಅದರಲ್ಲಿ ಸುಮಾರು 30 ಸಾವಿರ ಜನ ಬಡವರಿದ್ದಾರೆ. ಅಂತವರಿಗೆ ನಿವೇಶನ ನೀಡಿದರೇ ಅನುಕೂಲವಾಗುತ್ತದೆ. ಹೀಗಾಗಿ ನಿವೇಶನ ಖರೀದಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸದಸ್ಯ ದೇವೇಂದ್ರ ಕುಂಬಾರ ಸಭೆಯಲ್ಲಿ ಸೂಚಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಅವುಗಳಿಗೆ ನಾಮಫಲಕ ಹಾಕುವುದು ಹಾಗೂ ಒತ್ತುವರಿ ತೆರವುಗೊಳಿಸುವ ಕುರಿತು ಸಭೆಯಲ್ಲಿ ಠರಾವು ಪಾಸ್‌ ಮಾಡಲು ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸಭೆಯ ಗಮನಕ್ಕೆ ತಂದರು. ಪುರಸಭೆಯ ಉದ್ಯಾನವನಗಳ ಸರ್ವೇ ಮಾಡಿಕೊಡಲು 15 ಬಾರಿ ಸರ್ವೇ ಇಲಾಖೆಗೆ ಠರಾವು ಪಾಸ್‌ ಮಾಡಿ ಕಳುಹಿಸಿದರೂ,ಅದಕ್ಕೆ ಅಧಿಕಾರಿಗಳು ಸ್ಪಂದಿಸಿರುವುದಿಲ್ಲ. ಮುಖ್ಯಾಧಿಕಾರಿಗಳು ಕಾಳಜಿಯಿಂದ ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳ ಒತ್ತುವರಿ ಸರ್ವೇ ಮಾಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

 ಹಿರೇ ಇಂಡಿ ಕೆರೆ ಒತ್ತುವರಿ ತೆರವು ಹಾಗೂ ಅಭಿವೃದ್ಧಿ ಕುರಿತು ಡಿಪಿಆರ್‌ ತಯಾರಿಸಲು ಠರಾವು ಪಾಸ್‌ ಮಾಡಲಾಯಿತಲ್ಹಿರೇ ಇಂಡಿ ಕೆರೆಯಿಂದ ನಗರದ ಸ್ಮಶಾನದವರೆಗೆ ಬರುವ ಹಳ್ಳದ ಒತ್ತುವರಿಯು ಸರ್ವೇ ಆಗಬೇಕು. ಹಳ್ಳದ ಒತ್ತುವರಿ ಆಗಿದೆ. ಅದನ್ನು ತೆರವುಗೊಳಿಸಿ, ಅಭಿವೃದ್ಧಿ ಪಡಿಸಬೇಕು ಎಂದು ದೇವೆಂದ್ರ ಕುಂಬಾರ, ಉಮೇಶ ದೇಗಿನಾಳ ಸಭೆಯಲ್ಲಿ ತಿಳಿಸಿದರು. ಕುಡಿಯುವ ನೀರು ಒಳಚರಂಡಿ ಮಂಡಳಿಯಲ್ಲಿ ಕೆಲಸ ಮಾಡುವ ಬಸವರಾಜ ವಾಲಿ ಎಂಬುವವರು ಸದಸ್ಯರ ಕೆಲಸಕ್ಕೆ ಸ್ಪಂದಿಸುತ್ತಿಲ್ಲ. 

ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅವರನ್ನು ಬೇರೆ ಕೆಲಸಕ್ಕೆ ಕಳುಹಿಸಬೇಕು ಎಂದು ಸದಸ್ಯ ಅಸ್ಲಮ ಕಡಣಿ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಸಮ್ಮತಿ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸಂಗೀತಾ ಕರಕಟ್ಟಿ, ರೇಣುಕಾ ಉಟಗಿ, ಭಾಗೀರಥಿ ಕುಂಬಾರ, ಜ್ಯೋತಿ ರಾಠೋಡ, ಕವಿತಾ ರಾಠೋಡ, ಶೈಲಜಾ ಪೂಜಾರಿ, ಪ್ರವೀಣ ಸೋನಾರ, ಇಂಜನೀಯರ ಅಶೋಕ ಚಂದನ, ಎಇಇ ಪರ್ವತಯ್ಯ, ಅಸ್ಲಮ್‌ ಖಾದಿಮ, ಹುಚ್ಚಪ್ಪ ಶಿವಶರಣ, ಚಂದು ಕಾಲೇಬಾಗ, ಅಸ್ಪಾಕ, ಸೋಮನಾಯಕ ಇತರರು ಸಭೆಯಲ್ಲಿ ಇದ್ದರು.