ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಈ ಮೊದಲು ಕಾಣದಷ್ಟು ಭೀಕರ ಬರಗಾಲ ಈ ಬಾರಿ ಎದುರಾಗಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಈ ಬಗ್ಗೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ಅನುಷ್ಠಾನ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ವರ್ಷ ಮಳೆಯ ಕೊರತೆಯಿಂದಾಗಿ ನಿರೀಕ್ಷೆಗೂ ಮೀರಿದ ಸಮಸ್ಯೆ ಎದುರಾಗಿದೆ. ಅತ್ಯಂತ ಗಂಭೀರವಾಗಿರುವ ಈ ವರ್ಷದ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಮುಖ್ಯವಾಗಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಗ್ರಾಪಂಯವರು ಕ್ರಮ ಕೈಗೊಳ್ಳಬೇಕು ಎಂದರು.ನೀರನ್ನು ಒದಗಿಸಲು ಅಗತ್ಯವಿರುವ ಹಣಕ್ಕೆ ಕೊರತೆ ಆಗದಂತೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಹಾಲಿ ಇರುವ ನೀರಿನ ವ್ಯವಸ್ಥೆಯಿಂದ ಕೊರತೆಯಾದರೆ ಸ್ಥಳೀಯ ಜನಪ್ರತಿನಿಧಿಗಳ ನೆರವಿನಿಂದ ಖಾಸಗಿಯವರ ಕೊಳವೆಬಾವಿಗಳಿಂದ ನೀರನ್ನು ಒದಗಿಸಲು ಸಿದ್ಧರಾಗಿರುವಂತೆಯೂ ಸೂಚನೆ ನೀಡಿದರು.
ಜಲಜೀವನ್ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಯೋಜನೆ ಪ್ರಾರಂಭಗೊಂಡು ಎರಡು ವರ್ಷಗಳೇ ಸಂದಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗುವುದಕ್ಕೆ ಅಧಿಕಾರಿಗಳ ಉದಾಸೀನತೆಯೇ ಎದ್ದು ಕಾಣುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ತಾಲೂಕಿನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಹಿನ್ನಡೆಗೆ ಕಾರಣರಾಗಿರುವ ಅನರ್ಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ನಾಳೆಯಿಂದಲೇ ಕ್ರಮ ಕೈಗೊಳ್ಳಿ ಎಂದೂ ಸೂಚನೆ ನೀಡಿದರು.ಶಾಸಕ ಆರಗ ಜ್ಞಾನೇಂದ್ರ ಈ ಯೋಜನೆಯ ಕುರಿತಂತೆ ಮಾತನಾಡಿ, ಸೂಕ್ತ ಸಮಯದಲ್ಲಿ ಪೂರ್ಣಗೊಳಿಸಲು ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಬೇಕಾದ ಅಗತ್ಯವೂ ಇದೆ. ಜಲಜೀವನ್ ಯೋಜನೆಯ ಕಾಮಗಾರಿಯನ್ನು ಹೊರಗಿನ ಅನರ್ಹ ಗುತ್ತಿಗೆದಾರರು ಹಿಡಿದ ಪರಿಣಾಮ ಕೂಡಾ ಹಿನ್ನಡೆಗೆ ಕಾರಣವಾಗಿದೆ. ಈ ಯೋಜನೆಯ ನಿಯಮವನ್ನು ಸಡಿಲಿಸಿ ಸ್ಥಳೀಯ ಗುತ್ತಿಗೆದಾರರಿಗೆ ನೀಡುವುದು ಸೂಕ್ತ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡದಿದ್ದರೆ ತಾಲೂಕಿನಲ್ಲಿ ಈ ವರ್ಷ ನೀರಿಗೆ ಭಾರಿ ಸಮಸ್ಯೆ ಎದುರಾಗಲಿದೆ ಎಂದರು.
ತಾಲೂಕಿನ ನೊಣಬೂರು ಹಾದಿಗಲ್ಲು ಮತ್ತು ಕೋಣಂದೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಪ್ರದೇಶದಲ್ಲಿ ಇರುವ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿರುವುದಾಗಿ ಸಚಿವರ ಗಮನ ಸೆಳೆದ ಶಾಸಕ ಆರಗ ಜ್ಞಾನೇಂದ್ರ, ಈ ಪ್ರದೇಶದ ತೆರೆದ ಬಾವಿಗಳಲ್ಲೂ ಫ್ಲೋರೈಡ್ ಅಂಶ ಇರುವುದು ಆತಂಕಕಾರಿಯಾಗಿದೆ ಎಂದರು.ಈ ಕುರಿತು ಸಚಿವರು ಹಾವೇರಿ ಜಿಲ್ಲೆಯಲ್ಲಿ ಫ್ಲೋರೈಡ್ ಅಂಶದ ಬಗ್ಗೆ ಸಂಶೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಹೊಸನಗರ ತಾಲೂಕಿನ ಕೆಲವೆಡೆ ಕೂಡ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅಗತ್ಯವಾಗಿ ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಚಿಸಿ ಸಂಶೋಧನೆ ಮಾಡಿಸುವುದಾಗಿಯೂ ತಿಳಿಸಿ, ಎಲೆಚುಕ್ಕಿರೋಗದ ನಿಯಂತ್ರಣದ ಬಗ್ಗೆ ಸಂಬಂಧಿಸಿದ ವಿಜ್ಞಾನಿಗಳ ಜೊತೆ ಚರ್ಚಿಸಿರುವುದಾಗಿಯೂ ತಿಳಿಸಿದರು.
ಹೊಸನಗರದಲ್ಲಿ ನಿರ್ಮಿಸಲಾಗಿರುವ ಗೋಶಾಲೆಯಲ್ಲಿ 100 ಜಾನುವಾರುಗಳಿಗೆ ಅವಕಾಶವಿದೆ. ಆದರೆ ಮೇವಿಗೆ ಬೇಕಾದ ₹60 ಲಕ್ಷಗಳ ಕೊರತೆಯಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಸಚಿವರೊಂದಿಗೆ ಮಾತನಾಡಿ ಹಣವನ್ನು ಕೊಡಿಸುವುದಾಗಿ ಮಧು ಬಂಗಾರಪ್ಪ ತಿಳಿಸಿದರು.ಇಳುವರಿಗಿಂತ ವೆಚ್ಚವೇ ಅಧಿಕ:
ತಾಲೂಕಿನಲ್ಲಿ ಈ ವರ್ಷ ಶೇ.35 ಮಳೆ ಕೊರತೆಯಿಂದಾಗಿ 300 ಹೆಕ್ಟೇರು ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಕೈಬಿಡಲಾಗಿದೆ. ಭತ್ತದ ಬೆಳೆಗೆ ರೋಗ ಕೂಡಾ ಹೆಚ್ಚಿದ್ದು, ಈ ಬಾರಿ ಮೂರು ಬಾರಿ ಔಷಧಿ ಸಿಂಪರಣೆ ಮಾಡಲಾಗಿದೆ. ಹೀಗಾಗಿ ಬೆಳೆಯ ಇಳುವರಿಗಿಂತ ವೆಚ್ಚವೇ ಅಧಿಕವಾಗಿದೆ. ಇದರಿಂದಾಗಿ ಭತ್ತ ಬೆಳೆಯುವ ರೈತರು ಅಡಕೆ ಬೆಳೆಯ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಕೃಷಿ ಅಧಿಕಾರಿ ಪ್ರವೀಣ್ ತಿಳಿಸಿದರು.ಉಪವಿಭಾಗಾದಿಕಾರಿ ಸತ್ಯನಾರಾಯಣ, ತಾಪಂ ಆಡಳಿತಾಧಿಕಾರಿ ಗಣೇಶ್, ತಾಪಂ ಸಿಒ ಎಂ.ಶೈಲಾ, ಜಿಪಂ ಸಹಾಯಕ ಕಾರ್ಯದರ್ಶಿ ತಾರಾ, ತಹಸೀಲ್ದಾರ್ ಜಕ್ಕನಗೌಡರ್ ವೇದಿಕೆಯಲ್ಲಿದ್ದರು.
- - - -01ಟಿಟಿಎಚ್01:ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.