ಬೆಂಗಳೂರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯನ್ನು ಬೆದರಿಸಿ ₹4.5 ಲಕ್ಷ ಸುಲಿಗೆ ಮಾಡಿದ್ದ ಆರೋಪದ ಮೇರೆಗೆ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

- - ಕಷ್ಟಕ್ಕೆ ಆರ್ಥಿಕ ನೆರವು ಕೇಳುವ ನೆಪದಲ್ಲಿ ಸ್ನೇಹ ಮಾಡಿ ಸುಲಿಗೆ । ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಶೋಧ

--- ಕೆಲ ದಿನಗಳ ಹಿಂದೆ ತಿಪಟೂರಿನಲ್ಲಿ ಓದುತ್ತಿದ್ದೇನೆ ಎಂದು ಹೇಳುತ್ತಿದ್ದ ಸ್ಫೂರ್ತಿ ಎಂಬಾಕೆ ಪರಿಚಯ

- ಹಣಕಾಸು ನೆರವು ನೀಡಲು ಕೋರಿದ್ದ ಮಹಿಳೆ, ಬೆಂಗಳೂರಿನಲ್ಲಿ ಮತ್ತೆ ಭೇಟಿ

- ಹಣ ಕೊಡದಿದ್ದರೆ ಮರ್ಯಾದೆ ಕಳೆಯುವುದಾಗಿ ಬೆದರಿಸಿ ₹4.5 ಲಕ್ಷಕ್ಕೆ ಬೇಡಿಕೆ

- ಮರ್ಯಾದೆಗೆ ಅಂಜಿ ಹಣ ನೀಡಿದ್ದ ಸ್ವಾಮೀಜಿ: ದೂರಿನಲ್ಲಿ ಮಾಹಿತಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯನ್ನು ಬೆದರಿಸಿ ₹4.5 ಲಕ್ಷ ಸುಲಿಗೆ ಮಾಡಿದ್ದ ಆರೋಪದ ಮೇರೆಗೆ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಸ್ಫೂರ್ತಿ ಬಂಧಿತಳಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನುಳಿದ ನಾಲ್ಕೈದು ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ಕಷ್ಟಕ್ಕೆ ನೆರವು ಕೇಳುವ ನೆಪದಲ್ಲಿ ಸ್ವಾಮೀಜಿಯನ್ನು ಪರಿಚಯಿಸಿಕೊಂಡು ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ದೂರಲಾಗಿದೆ.

ಕೆಲ ದಿನಗಳ ಹಿಂದೆ ತಿಪಟೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಹೇಳಿ ನನಗೆ ಸ್ಫೂರ್ತಿ ಎಂಬಾಕೆ ಪರಿಚಯವಾದಳು. ಆಗ ನನಗೆ ಜೀವನ ನಡೆಸಲು ಆರ್ಥಿಕ ಕಷ್ಟವಿದೆ ಎಂದು ಅಲವತ್ತುಕೊಂಡು ನೆರವು ಕೋರಿದ್ದಳು. ಬಳಿಕ ಬೆಂಗಳೂರಿನಲ್ಲಿ ಮತ್ತೆ ಒಮ್ಮೆ ಭೇಟಿಯಾದಳು. ಆ ವೇಳೆ ನೀವು ಹಣ ಕೊಡದೆ ಹೋದರೆ ನಾನು ಮರ್ಯಾದೆ ಕಳೆಯುತ್ತೇನೆ ಎಂದು ಬೆದರಿಸಿ ₹4.5 ಲಕ್ಷ ಕ್ಕೆ ಬೇಡಿಕೆ ಇಟ್ಟಳು. ಆಗ ಮರ್ಯಾದೆಗೆ ಅಂಜಿ ನಾನು ಅಷ್ಟು ಹಣ ನೀಡಿದೆ. ಆದರೆ ಮತ್ತೆ ಒಂದು ₹ ಕೋಟಿ ಗೆ ಒತ್ತಾಯಿಸಿದ್ದಳು. ಅಲ್ಲದೆ ಆಕೆಯ ಸಹಚರರು ಸಹ ಕರೆ ಮಾಡುತ್ತಿದ್ದರು ಎಂದು ಸ್ವಾಮೀಜಿ ದೂರಿನಲ್ಲಿ ವಿವರಿಸಿದ್ದಾರೆ.

ಈ ಬ್ಲ್ಯಾಕ್‌ಮೇಲ್ ಸಹಿಸಲಾರದೆ ಜ.17 ರಂದು ಸಿಸಿಬಿ ಪೊಲೀಸ್ ಠಾಣೆಗೆ ಸ್ವಾಮೀಜಿ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಇನ್ನುಳಿದವರ ಪತ್ತೆಗೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.