ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ: ಮೂವರು ಸಾವು

| Published : Jan 29 2024, 01:32 AM IST

ಸಾರಾಂಶ

ಮೃತಪಟ್ಟ ಮೂವರು, ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಇಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಮೃತದೇಹ ಪತ್ತೆಹಚ್ಚಲು ಪರದಾಡುವಂತಾಯಿತು. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ಒಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಸುಡುಮದ್ದು ತಯಾರಿಕಾ ಘಟಕದಲ್ಲಿ ಸಂಜೆ 5 ಗಂಟೆಗೆ ಸ್ಫೋಟ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ.

ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ತ್ರಿಶೂರಿನ ವರ್ಗೀಸ್, ಹಾಸನ ನಾಯಕನಹಳ್ಳಿ ಚೇತನ್, ಕೇರಳದ ಸ್ವಾಮಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಇಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದರು.ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಸುಡುಮದ್ದು ತಯಾರಿ ನಡೆಸುತ್ತಿದ್ದರು. ಸಾಲಿಡ್ ಫೈಯರ್ ವರ್ಕ್ಸ್‌ ಎಂಬ ಘಟಕದಲ್ಲಿ ಘಟನೆ ನಡೆದಿದೆ. ಅಲ್ಲಿನ ಪರಿಸ್ಥಿತಿ ಭಯಾನಕವಾಗಿದ್ದು, ಸುಮಾರು 5 ಬಾರಿ ಸ್ಫೋಟ ಸಂಭವಿಸಿದೆ. ಸ್ಪೋಟಕ್ಕೆ ಕಾರಣ ತಿಳಿದುಬಂದಿಲ್ಲ, ತನಿಖೆ ನಡೆದಿದೆ.ಮೃತದೇಹಗಳು ಚೆಲ್ಲಾಪಿಲ್ಲಿ:ಮೃತಪಟ್ಟ ಮೂವರು, ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಇಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಮೃತದೇಹ ಪತ್ತೆಹಚ್ಚಲು ಪರದಾಡುವಂತಾಯಿತು. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ಒಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಸ್ಥಳದಲ್ಲಿ ಶೆಡ್ ಸಂಪೂರ್ಣ ಧ್ವಂಸವಾಗಿದ್ದು, ಇದರ ಸದ್ದು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ವಿಜಯ ಪ್ರಸಾದ್ ಸಹಿತ ವೇಣೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಎಸ್.ಪಿ. ರಿಷ್ಯಂತ್, ತಹಸೀಲ್ದಾರ್, ಡಿವೈಎಸ್‌ಪಿ, ಶಾಸಕ ಹರೀಶ್ ಪೂಂಜ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಭೇಟಿ ನೀಡಿದ್ದಾರೆ.