ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಎಲ್‌ಡಿಇ ಅಸೋಸಿಯೇಶನ್ ಮತ್ತು ರಾಜಸ್ಥಾನದ ಆಲನ್ ಕರಿಯರ್ ಇನ್ಸಿಟ್ಯೂಟ್ ನಡುವಿನ ಶೈಕ್ಷಣಿಕ ಸಹಭಾಗಿತ್ವ ಯಶಸ್ವಿಯಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಹೇಳಿದರು.ನಗರದ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಅಳಿಸಿಹಾಕಿ ವಿಜಯಪುರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಬಿಎಲ್‌ಡಿಇ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಮತ್ತೊಂದು ಮೈಲಿಗಲ್ಲು ಇಡಲು ಮುಂದಾಗಿದೆ ಎಂದರು.
ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮುಗಿಸಿ ಎಂಜಿನಿಯರ್ ಹಾಗೂ ವೈದ್ಯರಾಗುವ ಕನಸುಗಳನ್ನು ಹೊತ್ತು ಸುಮಾರು 400-500 ವಿದ್ಯಾರ್ಥಿಗಳು ದೂರದ ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ಜಿಲ್ಲೆಗಳಿಗೆ ಹೋಗಿ ತರಬೇತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬಿಎಲ್‌ಡಿಇ ಸಂಸ್ಥೆಯು ರಾಷ್ಟ್ರೀಯ ತರಬೇತಿ ಸಂಸ್ಥೆ ರಾಜಸ್ಥಾನದ ALLEN CAREER INSTITUTE ಸಹಯೋಗದೊಂದಿಗೆ ಬಿ.ಎಂ.ಪಾಟೀಲ ಪಿಯು ಕಾಲೇಜಿನಲ್ಲಿ 2025-26ನೇ ಸಾಲಿನಿಂದ ನೀಟ್, ಜೆಇಇ, ಕೆ-ಸೆಟ್ ತರಬೇತಿಯನ್ನು ಪ್ರಾರಂಭಿಸಿದ್ದಾಗಿ ತಿಳಿಸಿದರು.ಈ ಸಹಭಾಗಿತ್ವವು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜನಿಯರಿಂಗ್ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಗೆ ಪ್ರಯತ್ನಿಸುವವರಿಗೆ ವಿಶೇಷ ಅವಕಾಶಗಳನ್ನು ಒದಗಿಸಲು ಉದ್ದೇಶಿಸಿದೆ. ಈ ಸಹಕಾರವು NEET, JEE ಹಾಗೂ K-CET ಕೋಚಿಂಗ್, ವಿಶೇಷ ಪಠ್ಯಕ್ರಮ ಮತ್ತು ಸಮಗ್ರ ಅಧ್ಯಯನ ಸಾಮಗ್ರಿಗಳಿಗೆ ವಿಶೇಷ ಪ್ರವೇಶವನ್ನು ನೀಡಲಿದೆ. ಇದು ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚನ್ನಾಗಿ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಆಲನ್ ಅಕಾಡೆಮಿ ಮುಖ್ಯಸ್ಥ ಡಾ.ಸೀತಾರಾಮ ಮಾತನಾಡಿ, 1988ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಸ್ಥಾಪಿತವಾದ ಈ ಸಂಸ್ಥೆ NEET, JEE ಹಾಗೂ K-CET ಕೋಚಿಂಗ್‌ದಲ್ಲಿ ಮುಂಚೂಣಿಯಲ್ಲಿದೆ. ಈ ಪ್ರವೇಶ ಪರೀಕ್ಷೆಗಳಲ್ಲಿ ಶ್ರೇಷ್ಠ ಶ್ರೇಯಾಂಕದಲ್ಲಿ ವಿಜೇತರಾಗುವವರನ್ನು ತರಬೇತುಗೊಳಿಸುವ ಬದ್ಧತೆಯ ಗುರಿ ಹೊಂದಿದೆ. ಭಾರತದಲ್ಲಿ ಸುಮಾರು 64 ಕೇಂದ್ರಗಳಲ್ಲಿ ತರಬೇತಿ ನಡೆಯುತ್ತದೆ. ಪ್ರತಿವರ್ಷ 3.3 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆಯುವ ಸಾಮರ್ಥ್ಯವಿದೆ. ಇಲ್ಲಿಯವರೆಗೆ 30 ಲಕ್ಷ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ತರಬೇತಿ ಪಡೆದಿದ್ದು, ಉನ್ನತ ಮಟ್ಟದ ತರಬೇತಿ ನೀಡುವಲ್ಲಿ ವಿಶೇಷ ಪರಿಣತಿ ಹೊಂದಿರುವ ಸಂಸ್ಥೆ ಮಹತ್ವದ ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳಿಗೆ ಎಲ್ಲ ಅನುಕೂಲತೆಗಳನ್ನು ಒದಗಿಸುತ್ತದೆ. ಆಲನ್ ಕರಿಯರ್ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸುವಲ್ಲಿ ಹೆಸರುಗಳಿಸಿದೆ. ವಿಷಯ ಪರಿಣಿತ ಪ್ರಾಧ್ಯಾಪಕರು, ವೈಯಕ್ತಿಕ ಆಸಕ್ತಿ ವಹಿಸುತ್ತಾರೆ. ಯೋಜನಾಬದ್ಧವಾದ ಕ್ರಮಗಳನ್ನು ಕೈಕೊಂಡು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಾರೆ. ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಕಾಲಕಾಲಕ್ಕೆ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತದೆ. ಶಿಕ್ಷಕ ವೃಂದವು ವಿಸ್ತ್ರತ ಜ್ಞಾನ, ಅನುಭವ ಮತ್ತು ಕೌಶಲ್ಯಗಳನ್ನು ಹೊಂದಿದ್ದರಿಂದ ಇಲ್ಲಿಯ ಕಲಿಕಾ ಪದ್ಧತಿ ಅನನ್ಯವಾಗಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಎಲ್‌ಡಿಇ ಡೀಮ್ಡ್ ವಿವಿ ಕುಲಸಚಿವ ಡಾ.ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಬಗಲಿ, ಪಿಯು ಕಾಲೇಜು ಪಾಚಾರ್ಯ ನವೀನ್.ಎಸ್, ಗಿರೀಶ ಅಕಮಂಚಿ, ಸಿ.ಬಿ.ಪಾಟೀಲ ಉಪಸ್ಥಿತರಿದ್ದರು.