ಸಾರಾಂಶ
- 115 ಇಂಚು ಮಳೆ । ಸಂಕಷ್ಟದಲ್ಲಿ ಅಡಕೆ ಬೆಳೆಗಾರರು । ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ
ಯಡಗೆರೆ ಮಂಜುನಾಥ್ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ ಕಸಬಾ ಹೋಬಳಿಯಲ್ಲಿ ಜುಲೈ, ಆಗಸ್ಟ್, ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆ ಪರಿಣಾಮವಾಗಿ ಅಂದಾಜು 1250 ಎಕರೆ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು ಅಡಕೆ ಬೆಳೆಗಾರರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.ನರಸಿಂಹರಾಜಪುರ ತಾಲೂಕಿನ ಕಸಬಾ ಹೋಬಳಿ ಮುತ್ತಿನಕೊಪ್ಪ, ಕಡಹಿನಬೈಲು, ಮೆಣಸೂರು, ನಾಗಲಾಪುರ ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ 60 ರಿಂದ 65 ಇಂಚು ಮಳೆಯಾಗುತ್ತಿತ್ತು. ಇದರಿಂದ ಈ ಬಾಗದ ಗ್ರಾಮಗಳ ಅಡಕೆ ತೋಟಗಳಲ್ಲಿ ಹೆಚ್ಚಾಗಿ ಕೊಳೆ ರೋಗ ಕಾಣಿಸುತ್ತಿರಲಿಲ್ಲ. ಈ ವರ್ಷ 115 ಇಂಚು ಮಳೆ ಸುರಿದಿದ್ದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಮಳೆಯಾಗಿದೆ. ಕಸಬಾ ಹೋಬಳಿ ಸೂಸಲವಾನಿ, ಮೂಡಬಾಗಿಲು, ಆಲಂದೂರು, ಶೆಟ್ಟಿಕೊಪ್ಪ, ನಾಗಲಾಪುರ,ದ್ವಾರಮಕ್ಕಿ, ಬಣಗಿ, ನೇರ್ಲೆಕೊಪ್ಪ, ಅರಸಿನಗೆರೆ, ಮಂಜಿನಕೊಪ್ಪ ಸೇರಿದಂತೆ ಹಲವಾರು ಗ್ರಾಮಗಳ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ.
ಬೋರ್ಡೋ ಮಿಶ್ರಣ ಸಿಂಪಡಣೆಗೆ ತೊಂದರೆ:ಸಾಮಾನ್ಯವಾಗಿ ಕಸಬಾ ಹೋಬಳಿಯಲ್ಲಿ ಮಳೆ ಕಡಿಮೆ ಬೀಳುತ್ತಿರುವುದರಿಂದ ಅಡಕೆ ಬೆಳೆಗಾರರು ಜುಲೈ ಪ್ರಾರಂಭದಿಂದ ಕೊಳೆ ರೋಗ ಬಾರದಂತೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುತ್ತಿದ್ದರು. ಆದರೆ, ಈ ವರ್ಷ ಜುಲೈನಲ್ಲಿ ಪ್ರಾರಂಭವಾದ ಮಳೆ ಎಡೆ ಬಿಡದೆ ಒಂದು ತಿಂಗಳು ಸುರಿದಿದೆ. ಬೆಳೆಗಾರರಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡಲು ಸಮಯವೇ ಸಿಗಲಿಲ್ಲ. ಕೆಲವು ಅಡಕೆ ಬಳೆಗಾರರು ಮಳೆಯಲ್ಲೇ ಬೋರ್ಡೋ ಸ್ಪ್ರೇ ಮಾಡಿದ್ದರೂ ಮಳೆಯಿಂದ ಬೋರ್ಡೋ ಮಿಶ್ರಣ ತೊಳೆದುಹೋಗಿದೆ. ಇನ್ನು ಕೆಲವು ಅಡಿಕೆ ಬೆಳೆಗಾರರು ಆಗಸ್ಟ್ ನಲ್ಲಿ ಮೊದಲನೇ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡಿದ್ದಾರೆ. ಆದರೆ, ಮೊದಲೇ ಕೊಳೆ ರೋಗ ಬಂದಾಗಿತ್ತು. ಅಡಕೆ ಬೆಳೆಗಾರರು 2 ರಿಂದ 3 ಬಾರಿ ಬೋರ್ಡೋ ಮಿಶ್ರಣ ಸಿಂಪಡಿಸಿದರೂ ಕೊಳೆ ರೋಗ ತಡೆಗಟ್ಟಲು ಸಾಧ್ಯವಾಗಿಲ್ಲ.
ಒಣಗಿ ನಿಂತಿರುವ ಅಡಕೆ ಕೊನೆ: ಅಕ್ಟೋಬರ್ ತಿಂಗಳಲ್ಲಿ ಕೊನೆ ತೆಗೆಯಬೇಕಾಗಿತ್ತು. ಆದರೆ, ಅಕ್ಟೋಬರ್ ನಲ್ಲಿ ಪ್ರತಿ ದಿನ ಎಂಬಂತೆ ಮಳೆ ಸುರಿದಿದೆ. ಅಡಕೆ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಕೆಲವು ತೋಟಗಳಲ್ಲಿ ಅತಿಯಾದ ತೇವಾಂಶದಿಂದ ಅಕ್ಟೋಬರ್ ನಲ್ಲೇ ಅಡಕೆಗೆ ಮತ್ತೆ ಕೊಳೆ ರೋಗ ಕಾಣಿಸಿಕೊಂಡಿದೆ. ರೈತರು ಅಡಕೆ ಕೊಯ್ಲು ಬಿಟ್ಟು ಬೋರ್ಡೋ ಸಿಂಪಡಣೆ ಮಾಡಿದ್ದಾರೆ. ಈಗ ಬಿಸಿಲು ಕಾಣಿಸಿಕೊಳ್ಳುತ್ತಿದ್ದಂತೆ ಅಡಕೆ ಗೊನೆಗಳು ಕೊಳೆ ರೋಗದಿಂದ ಒಣಗಿ ನೇತಾಡುತ್ತಿರುವುದು ಕಂಡು ಬಂದಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.ಸರ್ಕಾರ ಕೊಳೆ ರೋಗದಿಂದ ನಷ್ಟ ಉಂಟಾಗಿರುವ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
-- ಕೋಟ್ --ಕಸಬಾ ಹೋಬಳಿಯ ಬಹುತೇಕ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಶೇ.40 ರಿಂದ 50 ರಷ್ಟು ಅಡಕೆ ಫಸಲು ನಷ್ಟ ಉಂಟಾಗಿದೆ. ಈ ಭಾಗದ ರೈತರಿಗೆ ಅಡಕೆ ಜೀವನಾಡಿ ಬೆಳೆಯಾಗಿದೆ. ಅಡಕೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಕಳೆದ 50 ವರ್ಷ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಈ ಭಾಗದಲ್ಲಿ ಕೊಳೆ ರೋಗ ಬಂದಿರಲಿಲ್ಲ. ಪ್ರತಿ ಅಡಕೆ ಮರದಲ್ಲಿ ಕೆಳಗೆ ಇರುವ ಅಡಕೆ ಕೊನೆ ಚೆನ್ನಾಗಿದ್ದು ಮೇಲೆ ಇರುವ ಅಡಕೆ ಕೊನೆಗೆ ಕೊಳೆ ರೋಗ ಬಂದಿದೆ.
--ಲೋಕೇಶ್ ಕಟಗಳಲೆ, ಅಡಕೆ ಬೆಳೆಗಾರ-- ಕೋಟ್ --
ಬೇಸಿಗೆ ದಿನಗಳಲ್ಲಿ ಅತಿಯಾದ ಉಷ್ಟಾಂಶದಿಂದ ಅಡಕೆ ತೋಟಗಳಲ್ಲಿ ಶೇ 10 ರಿಂದ 20 ರಷ್ಟು ಸಿಂಗಾರ ಒಣಗಿ ಹೋಗಿತ್ತು. ಜುಲೈಯಿಂದ ಅಕ್ಟೋಬರ್ ವರೆಗೆ ನಿರಂತರ 4 ತಿಂಗಳು ಸುರಿದ ಬಾರೀ ಮಳೆಗೆ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಕೊಳೆ ರೋಗ ಇಲ್ಲದ ತೋಟಗಳೇ ಇಲ್ಲ. ಕೊಳೆ ರೋಗ ಬಂದು ಅಡಕೆ ಗೊನೆಯ ಕಾಯಿಗಳು ಕಪ್ಪಾಗಿದ್ದು ಹಾಳಾಗಿವೆ. ನಿಗದಿತ ಸಮಯದಲ್ಲಿ ಬೋರ್ಡೋ ಮಿಶ್ರಣ ಸಿಂಪಡಣೆ ಸಾಧ್ಯ ವಾಗಿಲ್ಲ. ಈ ವರ್ಷ 116 ಇಂಚು ಮಳೆ ಸುರಿದಿರುವುದು ಕೊಳೆ ರೋಗಕ್ಕೆ ಕಾರಣ.-- ಗಾಂಧಿ ಗ್ರಾಮ ನಾಗರಾಜ,
ಅಡಕೆ ಸಂಸ್ಕೃರಣಾ ಘಟಕದ ಮಾಲೀಕ-- ಕೋಟ್ ---
ಈ ಭಾಗದ ಆಲಂದೂರು, ಬಣಗಿ, ನೇರ್ಲೆಕೊಪ್ಪ, ಅರಸಿನ ಗೆರೆ, ಶೆಟ್ಟಿಕೊಪ್ಪ, ಮಂಜಿನ ಕೊಪ್ಪ ಸೇರಿದಂತೆ ನೂರಾರು ಎಕ್ರೆ ಅಡಕೆ ತೋಟ ಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಇದೇ ಪ್ರಥಮ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಬೋರ್ಡೋ ಮಿಶ್ರಣ ಸಿಂಪಡಣೆಗೆ ಮಳೆ ಅವಕಾಶವೇ ನೀಡಲಿಲ್ಲ. ನಂತರ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡಿದರೂ ಕೊಳೆ ರೋಗ ತಡೆಗಟ್ಟಲು ಸಾಧ್ಯವಾಗಿಲ್ಲ. ಸರ್ಕಾರ ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು.-- ಅಂಬರೀಶ್ ಆಲಂದೂರು
ಅಡಕೆ ಬೆಳೆಗಾರ