ಹರಿಹರ ಗ್ರಾಮದೇವತೆ ಜಾತ್ರೆಯಲ್ಲಿ ಪ್ರಾಣಿಗಳ ಬಲಿಗೆ ಕಡಿವಾಣ ಹಾಕಿರಿ

| Published : Mar 18 2025, 12:30 AM IST

ಸಾರಾಂಶ

ಹರಿಹರ: ನಗರದಲ್ಲಿ ಮಾ.18ರಿಂದ ಪ್ರಾರಂಭವಾಗುವ ಗ್ರಾಮದೇವತೆ ಜಾತ್ರೆ ಹಿನ್ನೆಲೆ ಪ್ರಾಣಿಬಲಿ ಮಾಡಬಾರದು ಎಂದು ಜಿಲ್ಲಾಡಳಿತ ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ನುಡಿದರು.

ಹರಿಹರ: ನಗರದಲ್ಲಿ ಮಾ.18ರಿಂದ ಪ್ರಾರಂಭವಾಗುವ ಗ್ರಾಮದೇವತೆ ಜಾತ್ರೆ ಹಿನ್ನೆಲೆ ಪ್ರಾಣಿಬಲಿ ಮಾಡಬಾರದು ಎಂದು ಜಿಲ್ಲಾಡಳಿತ ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ನುಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.18ರಿಂದ ಮಾ.22 ರವರೆಗೆ ಗ್ರಾಮ ದೇವತೆ ಊರಮ್ಮ ಜಾತ್ರೆ ನಡೆಯುತ್ತಿದೆ. ಇದರಿಂದ ಸಹಸ್ರಾರು ಭಕ್ತರು ಆಗಮಿಸಿ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳನ್ನು ಸಲ್ಲಿಸುತ್ತಾರೆ. ಹರಕೆಯ ರೂಪದಲ್ಲಿ ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳ ಬಲಿ ನೀಡುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ಕರ್ನಾಟಕ ಪ್ರತಿಬಂಧಕ ಅಧಿನಿಯಮ 1959 ಮತ್ತು 1963- ತಿದ್ದುಪಡಿ ಕಾಯ್ದೆ: 1975 ಪ್ರಕಾರ ಪ್ರಾಣಿಬಲಿ ಮಾಡುವುದು ಅಪರಾಧ. ಹೈಕೋರ್ಟ್ ಆದೇಶದ ಅಡಿಯಲ್ಲಿ ಬಲಿ ನೀಡುವುದನ್ನು ಜಿಲ್ಲಾ, ತಾಲೂಕು ಆಡಳಿತ ಹಾಗೂ ಪೊಲೀಸ್ ಸಂಪೂರ್ಣವಾಗಿ ತಡೆಯುವುದು ಕರ್ತವ್ಯ ಆಗಿದೆ ಎಂದರು.

ಜಾತ್ರೆ ಪ್ರಾರಂಭದಿಂದ ಮುಗಿಯುವವರೆಗೆ ಪ್ರಾಣಿದಯೆ, ಅಹಿಂಸೆ, ಅಧ್ಯಾತ್ಮ ಸಂದೇಶ ಯಾತ್ರೆ ನಡೆಸಲಾಗುವುದು. ಹರಿಹರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಅಹಿಂಸೆ ಪ್ರಾಣಿದಯಾ ಸಂದೇಶ ಯಾತ್ರೆ ಕೈಗೊಂಡು ಜಾಗೃತಿ ಮೂಡಿಸಲಾಗುತ್ತದೆ ಎಂದರು.