ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುವವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗುವುದು.

ಕುಂದಗೋಳ:

ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುವವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಕೆಪಿಸಿಸಿ ವೀಕ್ಷಕ ಸಾಯಿನಾಥ್ ಗಾಂವಕರ ಹೇಳಿದರು.

ಪಟ್ಟಣದ ಮರಾಠ ಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ "ಸಂಘಟನಾ ಸೃಜನ ಅಭಿಯಾನ-2 " ರಡಿ ತಾಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ಸೂಚನೆಯಂತೆ ಹಾಗೂ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಯಾವುದೇ ನಾಯಕರ ಹಸ್ತಕ್ಷೇಪವಿಲ್ಲದೆ, ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ನ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿ, ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ಹಾಗೂ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ 15 ಜನರು ಅರ್ಜಿ ಸಲ್ಲಿಸಿದ್ದಾರೆ. ವೀಕ್ಷಕರ ಮುಂದೆ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಮುಕ್ತವಾಗಿ ತಿಳಿಸಿ, ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಬೇಕು ಎಂದರು.

ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಕೆಪಿಸಿಸಿ ವೀಕ್ಷಕಿ ಸ್ವಾತಿ ಮಾಳಗಿ ಮಾತನಾಡಿದರು. ಈ ವೇಳೆ ತಾಲೂಕು ಅಧ್ಯಕ್ಷ ಜಗದೀಶ ಉಪ್ಪಿನ್, ಷಣ್ಮುಖ ಶಿವಳ್ಳಿ, ವಿಜಯಾನಂದ ಹಾಲಿ, ಶಿವಾನಂದ ಬೆಂತೂರ, ಗೌಡಪ್ಪಗೌಡ ಪಾಟೀಲ, ಸುಪ್ರಿಯಾ ಪಾಟೀಲ, ಗಂಗಾಧರ ಪಾಣಿಗಟ್ಟಿ, ನಗರ ಘಟಕದ ಅಧ್ಯಕ್ಷ ಸಲೀಂ ಕ್ಯಾಲಕೊಂಡ, ಅಪ್ಪಣ್ಣ ಹಿರೇಗೌಡ್ರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.