ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕುಶಾಲನಗರ: ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟು ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವಲ್ಪ ಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಯುದ್ಧ ನೆಪದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಅನಿಲ ಬೆಲೆ ಏರಿಕೆ ಮಾಡಿದ್ದು ಇದೀಗ ಯುದ್ಧ ನಂತರ ಬೆಲೆ ಇಳಿಸಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ದಿವ್ಯ ಮೌನ ವಹಿಸಿದೆ ಎಂದು ವಿ ಪಿ ಶಶಿಧರ್ ಆರೋಪಿಸಿದರು.

ಉನ್ನತ ಶಿಕ್ಷಣದ ಪ್ರವೇಶಾತಿ ಹಿನ್ನೆಲೆಯಲ್ಲಿ ನಡೆದ ನೀಟ್ ಪರೀಕ್ಷೆಯ ಅಕ್ರಮ, ಪತ್ರಿಕೆಗಳು ಸೋರಿಕೆಯಾಗಿ ಮತ್ತೆ ಮರು ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯಾರ್ಥಿಗಳು ಕೆಲವರು ನೊಂದು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಜವಾಬ್ದಾರಿ ಹೊತ್ತು ಕೇಂದ್ರ ಬಿಜೆಪಿ ಸರ್ಕಾರ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಭರವಸೆ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವುದು ವಿಪರ್ಯಾಸ ಎಂದರು. ಬಿಜೆಪಿ ಹಿಡಿತದಲ್ಲಿರುವ ಕೆಲವು ಮಾಧ್ಯಮಗಳು ಮೌನವಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೇಂದ್ರ ಶಿಕ್ಷಣ ಸಚಿವ ತನ್ನ ವೈಫಲ್ಯಕ್ಕೆ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು. ಇದೀಗ ದೇಶದಲ್ಲಿಯೇ ಪ್ರಥಮ ಬಾರಿಗೆ ವಾಯುಪಡೆ ನೆರವಿನೊಂದಿಗೆ ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದು ಶಶಿಧರ್ ಆರೋಪಿಸಿದರು.

ರಾಜ್ಯ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್, ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿಯೂ ಸಂಪೂರ್ಣ ವೈಫಲ್ಯ ಕಾಣುತ್ತಿದೆ ಎಂದು ಹೇಳಿದರು. ಜನರು ಆಕ್ರೋಶಗೊಂಡಿದ್ದಾರೆ ಎಂದರು.

ಪ್ರಮುಖರಾದ ಮಂಜುನಾಥ್ ಕುಮಾರ್, ಕೆ ಕೆ ನಟೇಶ್ ಗೌಡ, ಚಂದ್ರ ಶೇಖರ್, ವಿ ಎಸ್ ಆನಂದ್ ಕುಮಾರ್, ಜೆ ಫಿಲೋಮಿನಾ, ತೊರೆನೂರು ಕೃಷ್ಣೇಗೌಡ ಹಾಗೂ ಪಕ್ಷದ ತಾಲೂಕು ಹೋಬಳಿ ಘಟಕಗಳ ಪದಾಧಿಕಾರಿಗಳು ಸ್ಥಳೀಯ ಸಮಿತಿಗಳ ಸದಸ್ಯರು, ಪಕ್ಷದ ಪ್ರಮುಖರು ಕಾರ್ಯಕರ್ತರು ಇದ್ದರು.