ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ದಿಗ್ಬಂಧನ

| Published : May 22 2025, 01:03 AM IST

ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ದಿಗ್ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ನಾಯಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಿತ್ತಾಪುರದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ದಿಗ್ಭಂಧನ ಹಾಕಿರುವ ಪ್ರಸಂಗ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ನಾಯಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಿತ್ತಾಪುರದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ದಿಗ್ಭಂಧನ ಹಾಕಿರುವ ಪ್ರಸಂಗ ನಡೆದಿದೆ.

ಇಂದು ಚಿತ್ತಾಪುರದಲ್ಲಿ ಆಪರೇಷನ್ ಸಿಂದೂರ ಬೆಂಬಲಿಸಿ ತಿರಂಗಾ ಯಾತ್ರೆ ನಡೆಯೋದಿತ್ತು. ಅದರಲ್ಲಿ ಪಾಲ್ಗೊಳ್ಳಲು

ಛಲವಾದಿ ನಾರಾಯಣಸ್ವಾಮಿಯವರು ಚಿತ್ತಾಪುರಕ್ಕೆ ಭೇಟಿ ನೀಡಿದ್ದರು. ನಾರಾಯಣಸ್ವಾಮಿ ಚಿತ್ತಾಪುರಕ್ಕೆ ಬಂದು ಅಲ್ಲಿನ ಸರಕಾರಿ ಅತಿಥಿ ಗೃಹದಲ್ಲಿ ತಂಗಿದ್ದಾರೆಂದು ಸುದ್ದಿ ಗೊತ್ತಾಗುತ್ತಿದದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಗುಂಪಾಗಿ ಅಲ್ಲಿಗೆ ಹೋಗಿ ಪ್ರವಾಸಿ ಮಂದಿರ ನುಗ್ಗಲೆತ್ನಿಸಿದರು.

ಪೊಲೀಸರು ಕಾರ್ಯಕರ್ತರನ್ನು ತಡೆದು ಹೊರಗೆ ಹಾಕಿದರಾದರೂ ಅವರೆಲ್ಲರೂ ಅತಿಥಿ ಗೃಹದ ಗೇಟ್ ಮುಂದೆಯೇ ಇದ್ದು, 3 ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರಲ್ಲದೆ ಛಲವಾದಿ ನಾರಾಣಸ್ವಾಮಿಯವರು ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಅಡಚಣೆ ಒಡ್ಡಿದರು.

ನಾರಾಯಣಸ್ವಾಮಿ ಕ್ಷಮೆ ಯಾಚನೆಗೆ ಕಾಂಗ್ರೆಸ್ಸಿಗರು ಪಟ್ಟು ಹಿಡಿದು ಅತಿಥಿ ಗೃಹದ ಮುಂದೆಯೇ ಹೋರಾಟ ನಡೆಸಿದ್ದರಿಂದ ಇದು ಪಟ್ಟಣದಲ್ಲಿರುವ ಬಸ್ ನಿಲ್ದಾಣ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು.

ಬೆಳಗ್ಗೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಛಲವಾದಿ ನಾರಾಯಣಸ್ವಾಮಿಯವರು ಮೋದಿಯವರನ್ನು ಆನೆಗೆ ಹೋಲಿಕೆ ಮಾಡಿ ಸಚಿವ ಪ್ರಿಯಾಂಕ್‌ರನ್ನು ನಾಯಿ ಎಂದು ತೆಗಳಿದ್ದರು. ಅವಕಾಶ ಸಿಕ್ಕಾಗೆಲ್ಲ ಪ್ರಧಾನಿ ಮೋದಿಯವರಿಗೆ ಟೀಕಿಸುವ ಪ್ರಿಯಾಂಕ್‌ ಚಾಳಿಯನ್ನು ಪ್ರಸ್ತಾಪಿಸುತ್ತ ಛಲವಾದಿ ನಾರಾಯಣಸ್ವಾಮಿ ಆನೆ ಹೋಗುವಾಗ ಶ್ವಾನ ಬೊಗಳುತ್ತದೆ ಎಂದು ಹೇಳಿದಾಗ, ಇಲ್ಲಿ ಆನೆ, ಶ್ವಾನ ಯಾರೆಂಬ ಸುದ್ದಿಗಾರರ ಪ್ರಶ್ನೆಗೆ ಈ ಹೇಳಿಕೆಯಲ್ಲಿನ ಆನೆ ಎಂದರೆ ಪ್ರಧಾನಿ ಮೋದಿಯವರಾಗಿದ್ದಾರೆ, ನಾಯಿ ಎಂದರೆ ಸಚಿವ ಪ್ರಿಯಾಂಕ್‌ ಖರ್ಗೆ ಎಂದು ನಿಂದಿಸಿದ್ದರು.

ಛಲವಾದಿ ನಾರಾಯಣಸ್ವಾಮಿ ಕಲಬುರಗಿ ಸುದ್ದಿಗೋಷ್ಠಿಯಲ್ಲಿನ ಈ ಹೇಳಿಕೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಕೆರಳಿದ್ದರಲ್ಲದೆ ಛಲವಾದಿ ಚಿತ್ತಾಪುರಕ್ಕೆ ಬರುತ್ತಲೇ ಘೇರಾವ್‌ ಹಾಕಿ ಸಚಿವ ಖರ್ಗೆ ಕ್ಷಮೆ ಕೇಳುವಂತೆ ಬಿಗಿ ಪಟ್ಟು ಹಿಡಿದು ಹೋರಾಟಕ್ಕೆ ಮುಂದಾಗಿದ್ದರು.

ಹೋರಾಟ ಅತಿಯಾಯ್ತು- ಛಲವಾದಿ ಆಕ್ರೋಶ

ಚಿತ್ತಾಪುರದಲ್ಲಿನ ಸರಕಾರಿ ಐಬಿಯಲ್ಲಿಯೇ ತಂಗಿರುವ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಲ್ಲಿಂದಲೇ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದು, ಈ ಹೋರಾಟ ಅತಿಯಾಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕ್‌ ಖರ್ಗೆ ತಮ್ಮ ವಿರುದ್ಧ, ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡಿಲ್ಲವಾ? ಇದು ಸುಳ್ಳಾ, ರಾಜಕೀಯದಲ್ಲಿ ಟೀಕೆ ಟಿಪ್ಪಣಿ ಸಹಜ, ಆದರೆ ಈ ರೀತಿ ಪ್ರತಿಭಟನೆ ಸರಿಯಲ್ಲವೆಂದು ನಾರಾಯಣಸ್ವಾಮಿ ಹೇಳಿದರು.

ನಾನು ಸುದ್ದಿಗೋಷ್ಠಿಯಲ್ಲಿನ ಹೇಳಿಕೆಗೆ ಪೂರಕವಾಗಿ ಗಾದೆ ಮಾತು ಹೇಳಿರುವೆ. ಅದು ಅಸಂವಿಧಾನಿಕ ಎಂದಾದಲ್ಲಿ ಬೇಕಾದರೆ ಸಚಿವ ಖರ್ಗೆ ನನ್ನ ಮೇಲೆ ಕೇಸ್‌ ಹಾಕಲಿ, ಸ್ವತಃ ಪ್ರಿಯಾಂಕ್‌ ಖರ್ಗೆ ನನ್ನ ಬಳಿ ಮಾತನಾಡಿ ತಮಗೆ ನೋವಾಗಿದೆ ಎಂದು ಹೇಳಿದರೆ ನಾನು ನನ್ನ ಮಾತು ವಾಪಸ್ ಪಡೆಯುವೆ.

ಇದನ್ನೆಲ್ಲ ಬಿಟ್ಟು ಈ ರೀತಿ ಬೆಂಬಲಿಗರನ್ನು ನನ್ನ ವಿರುದ್ಧ ಎತ್ತಿಕಟ್ಟಿ ಹೋರಾಟಕ್ಕೆ ಕಳುಹಿಸಿದರೆ ಅಂಜುವ ಮಗ ನಾನಲ್ಲ. ಐಬಿಯಲ್ಲಿಯೇ ಇರುವೆ. ನಾನು ಕ್ಷಮೆ ಕೇಳೋದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.