ಸರ್ಕಾರ ತಡೆ ಹಿಡಿದಿರುವ ನಗರೋತ್ಥಾನ ಯೋಜನೆಯ 60 ಕೋಟಿ ಹಣ ಬಿಡುಗಡೆಗೆ ಒತ್ತಾಯ : ಆಶಾ ರಾಜಶೇಖರ್

| Published : Dec 15 2024, 02:05 AM IST / Updated: Dec 15 2024, 04:59 AM IST

ಸರ್ಕಾರ ತಡೆ ಹಿಡಿದಿರುವ ನಗರೋತ್ಥಾನ ಯೋಜನೆಯ 60 ಕೋಟಿ ಹಣ ಬಿಡುಗಡೆಗೆ ಒತ್ತಾಯ : ಆಶಾ ರಾಜಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ತಡೆ ಹಿಡಿದಿರುವ ನಗರೋತ್ಥಾನ ಯೋಜನೆಯ 60 ಕೋಟಿ ಹಣ ಬಿಡುಗಡೆಗೆ ನಗರಸಭೆಯ ಸರ್ವಸದಸ್ಯರು ಶಾಸಕರನ್ನು ಭೇಟಿ ಮಾಡಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ತಿಳಿಸಿದರು. ಹೊಸಕೋಟೆಯಲ್ಲಿ ನಗರಸಭೆ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

 ಹೊಸಕೋಟೆ : ನಗರಸಭೆ ನಿಧಿಯಲ್ಲಿ ಕೇವಲ 40 ಲಕ್ಷ ಹಣವಿದ್ದು ಕೇವಲ ಸಂಬಳ ಹಾಗೂ ದೈನಂದಿನ ಬಳಕೆಗಷ್ಟೇ ಮೀಸಲಾಗಿದ್ದು ಸರ್ಕಾರ ತಡೆ ಹಿಡಿದಿರುವ ನಗರೋತ್ಥಾನ ಯೋಜನೆಯ 60 ಕೋಟಿ ಹಣ ಬಿಡುಗಡೆಗೆ ನಗರಸಭೆಯ ಸರ್ವಸದಸ್ಯರು ಶಾಸಕರನ್ನು ಭೇಟಿ ಮಾಡಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ತಿಳಿಸಿದರು.

ನಗರದಲ್ಲಿ ನಗರಸಭೆ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸಮರ್ಪಕ ಅಭಿವೃದ್ಧಿಗೆ ಒಟ್ಟು 60 ನಿರ್ಣಯಗಳನ್ನು ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ಮೋರಿ ನಿರ್ವಹಣೆ, ಬೀದಿ ದೀಪ ಅಳವಡಿಕೆ ಸೇರಿ ಹಲ ವಿಚಾರಗಳು ಮಂಡಿಸಲಾಗಿದ್ದು, ಕಾಮಗಾರಿಗಳಿಗೆ ಹಣದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಶಾಸಕರನ್ನು ಆಹ್ವಾನಿಸಿ ನಗರಸಭೆ ಸಮಸ್ಯೆಗಳ ಬಗ್ಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ನಗರಸಭೆ ಉಪಾಧ್ಯಕ್ಷ ಸಿಪಿಎನ್ ನವೀನ್ ಮಾತನಾಡಿ, ನಗರದ ಹೊರವಲಯದ ಕಲ್ಲಹಳ್ಳಿಯಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕವನ್ನು ಕೂಡಲೆ ಉದ್ಘಾಟಿಸಿ ಚಾಲನೆ ನೀಡಿದಲ್ಲಿ ಕಸದ ಸಮಸ್ಯೆ ಬಗೆಹರಿಸಲು ಸುಲಭವಾಗುತ್ತದೆ. ನಗರಸಭೆಗೆ ಬರಬೇಕಾದ ಆದಾಯ ಮೂಲಗಳಲ್ಲಿ ಗೊಂದಲವಿದ್ದು, ಶಾಸಕರು ಸರ್ಕಾರ ಹಾಗೂ ಸಂಬಂಧ ಪಟ್ಟ ಮಂತ್ರಿಗಳಿಂದ ಇ-ಖಾತೆ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ೬೦ ಕೋಟಿ ನಗರೋತ್ಥಾನ ಅನುದಾನವನ್ನು ಕೂಡಲೆ ಬಿಡುಗಡೆ ಮಾಡಲು ಒತ್ತಾಯಿಸಬೇಕು ಎಂದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಉಪಾಧ್ಯಕ್ಷ ಸಿಪಿಎನ್ ನವೀನ್ ಕುಮಾರ್, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

ಕ್ಷೇತ್ರದಲ್ಲಿ ಶಾಸಕ ಶರತ್ ಬಚ್ಚೇಗೌಡರು ಅಭಿವೃದ್ಧಿ ಕನಸು ಹೊತ್ತು ಕೆಲಸ ಮಾಡುತ್ತಿದ್ದು, ಪಕ್ಷಾತೀತವಾಗಿ ನಗರಸಭೆ ಸದಸ್ಯರು ಶಾಸಕರನ್ನು ಭೇಟಿ ಮಾಡಿ ನಗರದ ಅಭಿವೃದ್ಧಿ ಕುರಿತು ಚರ್ಚೆ ಮಾಡಬೇಕು. ಹೊಸಕೋಟೆಯನ್ನು ಅಭಿವೃದ್ಧಿಪಡಿಸಿ ಶಾಸಕರ ಮಾದರಿ ತಾಲೂಕು ಕನಸು ನನಸು ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

-ಕೇಶವಮೂರ್ತಿ, ವಿಪಕ್ಷ ನಾಯಕ, ನಗರಸಭೆ