ಉಡುಪಿ ಡಿಎಆರ್ ಪೊಲೀಸ್ ಪಡೆಯಿಂದ ರಕ್ತದಾನ ಶಿಬಿರ

| Published : Feb 24 2024, 02:34 AM IST

ಸಾರಾಂಶ

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 1999ರ ತಂಡದ ರಜತ ಸಂಭ್ರಮದ ಪ್ರಯುಕ್ತ ಡಿಎಆರ್ ಕೇಂದ್ರ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಶಿಬಿರವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 1999ರ ತಂಡದ ರಜತ ಸಂಭ್ರಮದ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಡಿಎಆರ್ ಕೇಂದ್ರ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಮಾತನಾಡಿ, ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು. ಪೊಲೀಸ್ ಇಲಾಖೆಯಿಂದ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ನಡೆಸಿ ಎಂದು ಸಲಹೆ ನೀಡಿದರು‌‌.ರಕ್ತದಾನ ಮಾಡುವದರಿಂದ ಯಾವುದೇ ತೊಂದರೆ ಆಗಲಾರದು. ಓರ್ವ ವ್ಯಕ್ತಿಗೆ ಅತೀ ಅವಶ್ಯಕ ಸಂದರ್ಭದಲ್ಲಿ ರಕ್ತ ನೀಡವುದರಿಂದ ಮರುಜೀವ ನೀಡಿದಂತಾಗುವುದು. ಇದರಿಂದ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿದಂತಾಗುವುದು ಎಂದವರು ಹೇಳಿದರು‌.ಸಶಸ್ತ್ರ ಪಡೆಯ 25 ವರ್ಷಗಳ ಸಮಾಜ ರಕ್ಷಣೆಯ ಸೇವೆ ಅಭಿನಂದನೀಯವಾಗಿದ್ದು, ಈ ಸೇವೆಯೊಂದಿಗೆ ರಕ್ತದಾನದ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ. ಇದು ಮೂಲಕ ಈ ಪೊಲೀಸರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ, ರಕ್ತದಾನದ ಮಹತ್ವವನ್ನು ವಿವರಿಸಿದರು. ಡಿಎಆರ್ ಡಿವೈಎಸ್ಪಿ ತಿಮ್ಮಪ್ಪ ಗೌಡ ಜಿ. ಉಪಸ್ಥಿತರಿದ್ದರು. ಡಿಎಆರ್ ಎಸ್ಐ ರವಿಕುಮಾರ್ ಸ್ವಾಗತಿಸಿ, ಎಸ್ಐ ಬಾಲಸುಬ್ರಹ್ಮಣ್ಯ ವಂದಿಸಿದರು. ಯೋಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಡಿಎಆರ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಡಿಎಆರ್ ಕೇಂದ್ರ ಕಚೇರಿಯ ಸುಮಾರು 80 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.