ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಪ್ರಾದೇಶಿಕ ರಕ್ತ ಪೂರಣಾ ಘಟಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಎನ್.ಎಸ್.ಎಸ್. ಘಟಕಗಳ ರೆಡ್ ರಿಬ್ಬನ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ

ಮಂಗಳೂರು: ರಕ್ತದಾನದಿಂದ ನಮ್ಮ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಹೇಳಿದರು.ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಪ್ರಾದೇಶಿಕ ರಕ್ತ ಪೂರಣಾ ಘಟಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಎನ್.ಎಸ್.ಎಸ್. ಘಟಕಗಳ ರೆಡ್ ರಿಬ್ಬನ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ 2026 , ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸಮ್ಮಾನ ಕಾರ್ಯಕ್ರಮವನ್ನು ನಗರದ ಪಡೀಲ್ ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮಂಗಳೂರಿನ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್‌ ಮಾತನಾಡಿ, ರಕ್ತದಾನ ಮಾಡುವ ವ್ಯಕ್ತಿ ಆರೋಗ್ಯವಂತನಾಗಿರಬಹುದು. ರಕ್ತ ಪಡೆಯುವವರಿಗೂ ಜೀವದಾನ ಸಿಗಲಿದೆ. ಜೀವ ಉಳಿಸಲು ಡಾಕ್ಟರ್‌ ಆಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು. ರಕ್ತದಾನಿಗಳು ನೈಜ ಹೀರೋಗಳು ಎಂದು ಅವರನ್ನು ನಾವು ಬಿಂಬಿಸಬೇಕು ಎಂದರು.

ರಕ್ತದಾನಿಗಳಾದ ಕೃತನ್‌ ಕುಮಾರ್‌ (101 ಬಾರಿ ರಕ್ತದಾನ), ಶೀಫಿ ಪಿರೋಜ್‌ (100 ಬಾರಿ), ವಿಶ್ವನಾಥ ಕಾಮತ್ (90 ಬಾರಿ), ದೀಪಕ್‌ ನಾಯರ್‌ (72 ಬಾರಿ), ಗಣೇಶ್‌ಪ್ರಸಾದ್‌ (64 ಬಾರಿ), ಸತೀಶ್‌ (51 ಬಾರಿ) ಅವರನ್ನು ಸನ್ಮಾನಿಸಲಾಯಿತು.

ಉಳ್ಳಾಲ ತಾಲೂಕು ನೋಡೆಲ್ ಅಧಿಕಾರಿ ಪ್ರಜ್ಞಾ ಅಮ್ಮೆಂಬಳ, ಕಾರ್ಯಕ್ರಮದ ರೂವಾರಿ ಡಾ.ಖತಿಜಾ ದಿಲ್ಶಾದ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಮತ್ತಿತರರು ಇದ್ದರು.

ವೆನ್ಲಾಕ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ.ಶರತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಸ್ವಾಗತಿಸಿದರು. ಡಾ.ಖತಿಜಾ ದಿಲ್‌ಶಾದ್‌ ವಂದಿಸಿದರು.

ರಕ್ತದಾನ ಶಿಬಿರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ಬಾರಿಗೆ ರಕ್ತದಾನ ಶಿಬಿರ ನಡೆಸಲಾಯಿತು. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು, ಜಿಲ್ಲಾ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ರಕ್ತದಾನ ಮಾಡಿದರು.